Anitha Naresh Manchi

MyFreeCopyright.com Registered & Protected

Wednesday, December 22, 2010

ಚಕ್ರ

ಚಕ್ರ 

ಸುತ್ತುವ ಚಕ್ರದೊಳಗೊಂದು 
ಬದುಕ ಬಣ್ಣ ಹುಡುಕುವ ನೋಟ..
ಒಮ್ಮೆ ಮೇಲೇರಿದರೆ ಕ್ಷಣದಲ್ಲೇ
ಕೆಳಗಿಳಿದು ಬಳಲುವ  ತಾಕಲಾಟ 

ಏರುವಾಗಿನ ಕೇಕೆ, ಸಹಜ ನಗು 
ಇಳಿಯುವಾಗಿಲ್ಲ
ಹೊತ್ತ ಸಂಕಟದ ಜೊತೆಗೆ 
ಮಂದಿ  ಮಾತ  ಕೇಳಬೇಕಲ್ಲ 


ಏರುವಾಗೆಲ್ಲ ಉಬ್ಬಿಸಿ, ಕುಣಿದಾಡಿದವರು
ಕೆಳಗಿಳಿಯುವಾಗ ನಿಂತಿದ್ದರು, ತಪ್ಪಿಸಿ ಕಣ್ಣ ದೃಷ್ಟಿ 
ಹೊತ್ತು ತಂದಿದ್ದೇನೆ ಬದುಕ ಕಲಿಕೆಯ
ಬಂಜೆಯಾಗಳೆಂದೂ ಸೃಷ್ಟಿ 

ಏರಿಳಿತದ ನಿಜದಾರಿಯ 
ನಿತ್ಯ ದರ್ಶನವೀ ಚಕ್ರ 
ಏರಿದವನು ಇಳಿಯಲೇಬೇಕೆಂಬುದ ಒಪ್ಪಿಕೊಂಡರೆ  
ಬದುಕು ಬೇವಿನ ಜೊತೆಗಿನ ಶರ್ಕರ 
 

Wednesday, December 15, 2010

ಉಭಯ ಕುಶಲೋಪರಿ



ನಾನೆಲ್ಲಿಂದ ಬಂದೆ ಎಂದು 
ಕಳಚಿಕೊಂಡ ತೊಟ್ಟ ಕೇಳಬೇಕು 
ಒಂದಿಷ್ಟು ಹೊತ್ತು ನಿನ್ನ ಸಂಗಡ
ಇರಬೇಕೆಂದು ಬಯಸಿ ಬಂದದ್ದಲ್ಲ 
ಯಾರೋ ತೇಲಿಬಿಟ್ಟರು ..


ಈ ಬಂಧ ಬಹಳ ಹೊತ್ತಿನದಲ್ಲ ಗೆಳತೀ.. 
ಇನ್ನೊಂದು ತೆಳು ಗಾಳಿಯೂ ಬೇರ್ಪಡಿಸೀತು ..
ಚಿಂತೆ ಬಿಡು .. ಮಣ್ಣ ನಂಟೇನು ಹೊಸತೆ ..
ಅಲ್ಲೇ ಹುಟ್ಟಿದ್ದು .. ಮರಳುವಾಗ ಮಾತ್ರ ನೋವೇಕೆ 
ಬಣ್ಣ ಕಳೆದುಕೊಂಡರೂ ಬದುಕು 
ಹೊಸ ಸಸಿಗೆ ಗೊಬ್ಬರವಾಗುವ ಬಯಕೆ ..

* * ಪುಳಕ



ಹಾರಾಡುವ ಜೀವಕ್ಕೆ
ಒಮ್ಮೆ ಕಾಲೂರಿ ನಿಲ್ಲುವ ಆಸೆ
ಆಸರೆಗೆ ಯಾರಾದರೇನು .. ?
ಮುಗಿದ ಅಧ್ಯಾಯದಂತೆ
ಪುಟ ಮುಚ್ಚಿ ಮಲಗಿದ್ದ
ಸಣ್ಣ ಒಣ ಕೊರಡು 


ಚೈತನ್ಯದ ಧಾರೆಯೇ ಎರಕ ಹೊಯ್ದ
ಪುಟ್ಟ ಪಾದ
ವಿಶ್ರಾಂತಿಯ ಬೇಡಿ
ಮೃದುವಾಗಿ ಸೋಕಲು
ಸತ್ತು ಬಿದ್ದ ಮನ
ಪುಳಕಿತಗೊಂಡು
ಕ್ಷಣ ಹೊತ್ತು ಮತ್ತೆ ಬದುಕಿತು 

Monday, December 13, 2010

ಕವಿ ನಿವಾಸ

 

ರಾಷ್ಟ್ರ ಕವಿ ಕುವೆಂಪು ಅವರ ಕುಪಳ್ಳಿಯ ಮನೆಗೊಮ್ಮೆ ಭೇಟಿ ನೀಡಬೇಕೆಂಬುದು ಬಹುಕಾಲದ ಕನಸು.. ಪ್ರತಿಸಲವೂ ಕುಪ್ಪಳ್ಳಿ ಎಂಬ ನಾಮ ಪಲಕ ಕಂಡಾಗ ಆಸೆ ಗರಿಕೆದರಿದರೂ ಕೆಲಸದ ಒತ್ತಡ , ಸಮಯದ ಅಭಾವ , ಹೀಗೆ ಯಾವುದಾದರೊಂದು ಕಾರಣ ಗಳನ್ನು ಮುಂದಿಕ್ಕಿ ಹೋಗಲಾರದೆ ಉಳಿದೆ ಬಿಡುತಿತ್ತು. ಈ ಸಲವಂತೂ ಹೋಗಲೇ ಬೇಕೆಂಬ ನಿರ್ಧಾರ ಅಲ್ಲಿಗೆ ಎಳೆದೊಯ್ದಿತು. ನಾಡ ಹಂಚಿನ ಮನೆ, ಮನೆಯ ಮುಂದೆ ಸುಂದರ ಹುಲ್ಲ ಹಾಸು, ನಡು ನಡುವೆ ಹೂವಿನ ಗಿಡಗಳು, ಒಂದು ಬದಿಯಲ್ಲಿ ಪೀಠದ ಮೇಲೆ ಕುಳಿತಂತಿದ್ದ ಕವಿ ಕುವೆಂಪು ರವರ ಪುತ್ಥಳಿ ನಮ್ಮನ್ನು ಮನೆಯ ಒಳಗೆ ಬನ್ನಿ ಎಂದು ಆಹ್ವಾನಿಸುವಂತೆ ಕಾಣಿಸುತ್ತಿತ್ತು. ಸುಂದರ ಕೆತ್ತನೆಗಳ ಹೆಬ್ಬಾಗಿಲು, ಗೋಡೆಯ ಮೇಲೆ "ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು" 
ಎಂಬ ಕವಿವಾಣಿ ಒಳಗಿನ ವೈಭವದ ಮುನ್ಸೂಚನೆ ಇತ್ತಿದ್ದವು. ಒಬ್ಬರಿಗೆ 5 ರೂ ನಂತೆ ಪ್ರವೇಶದರ ನೀಡಿ ಪ್ರವೇಶ ಪತ್ರ ಪಡೆದುಕೊಂಡು ಒಳ ಪ್ರವೇಶಿಸಿದೆವು. ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಪ್ರವೇಶ ಪತ್ರವನ್ನು ಧ್ವಾರದಲ್ಲಿ ನಿಂತವರು ಹರಿದು ನಮ್ಮನ್ನು ಒಳ ಬಿಡುತ್ತಾರೆ. ಈಗಲೂ ಹಾಗೆ ಆಗುವುದೆಂಬ ಭಯದಲ್ಲಿ ಅದನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದೆ. ಐದು ರುಪಾಯಿಯ ಟಿಕೆಟ್ ಮೇಲೆ ಅಷ್ಟ್ಯಾಕೆ ಆಸೆ ಅಂತೀರಾ ..ಕವಿ ಮನೆಯಾ ಸುಂದರ ಚಿತ್ರವನ್ನು ಹೊಂದಿದ್ದ ಅದು ಎರಡೂ ಬದಿಗಳಲ್ಲಿ ಕವಿವಾಣಿಯನ್ನು ಸಾರುತಿತ್ತು.ಅದಾಗಲೇ ನಮ್ಮ ಮನೆಯ ಫೋಟೋ ಆಲ್ಬಮ್ ಒಳಗೆ ಜಾಗ ಪಡೆಯಲು ತಯಾರಿ ನಡೆಸಿತ್ತು. ಪ್ರವೇಶಿಸಿದ ಕೂಡಲೇ ನಗುಮುಖದಿನದ ನಮ್ಮನ್ನು ಬರ ಮಾಡಿಕೊಂಡು ಮನೆಯ ಒಳಗಿನ ಅಂದವನ್ನು ನಾವಾಗಿಯೇ ನೋಡಲು ಅನುವು ಮಾಡಿ ಕೊಡುತ್ತಾರೆ. ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಇಲ್ಲದ ಅಲ್ಲಿ ಎಲ್ಲವನ್ನೂ ಕಣ್ಣುಗಳಲ್ಲೇ ತುಂಬಿಕೊಳ್ಳುವ ಆತುರವಿತ್ತು.
ಧಾನ್ಯ ಶೇಖರಿಸಿಡುವ ದೊಡ್ಡ ಗಾತ್ರದ ಮರದ ಪೆಟ್ಟಿಗೆಗಳು, ಹಳೆ ಕಾಲದ ಮರದ ಸಾಮಗ್ರಿಗಳು ಕಣ್ಣುಗಳನ್ನು ಸೆಳೆದವು. ಗೋಡೆಯಲ್ಲಿ ತೂಗಿ ಬಿದ್ದಿದ್ದ ಕುವೆಂಪುರವರ ಕೋಟು, ಬದಿಯಲ್ಲಿದ್ದ ಊರುಗೋಲು ಕುವೆಂಪುರವರು ಈಗಷ್ಟೇ ಒಳ ಹೋಗಿದ್ದಾರೆನೋ ಎಂಬ ಭ್ರಮೆ ಮೂಡಿಸಿತು.ಸುಂದರ ಕೆತ್ತನೆಯ ಕಂಬಗಳು, ನಾಜೂಕಿನ ಕುಸುರಿಯ ಬಾಗಿಲು, ಒಂದಿಷ್ಟು ಹೊತ್ತು ನಮ್ಮನ್ನು ಅಲ್ಲಿಯೇ ಹಿಡಿದು ನಿಲ್ಲಿಸಿತು. ಒಳ ಭಾಗಕ್ಕೆ ಬಂದರೆ ಅಲ್ಲಿಯೂ ಹಳೆಕಾಲದ ಮರದ ಸಾಮಗ್ರಿಗಳನ್ನು ಅಂದವಾಗಿ ಜೋಡಿಸಿಟ್ಟಿದ್ದರು. ಅಲ್ಲಿದ್ದ ಮರದ ಏಣಿಯನ್ನೇರಿ ಮೇಲಿನ ಮಹಡಿಗೆ ಬಂದರೆ ಅಲ್ಲಿ ಕುವೆಂಪುರವರು ಪಡೆದ ಪ್ರಶಸ್ತಿಗಳು, ಅವರ ಅಮೂಲ್ಯ ಗ್ರಂಥಗಳು,ಅವರ ಬಗೆಗೆ ಬೇರೆ ಲೇಖಕರು ಬರೆದ ಪುಸ್ತಕಗಳು ಕಂಡು ಬಂದವು.ಗೋಡೆಯಲ್ಲಿ ಅಳವಡಿಸಿದ್ದ ಸ್ಪೀಕರ್ ನಲ್ಲಿ ಮೆಲುದನಿಯಲ್ಲಿ ಕೇಳಿ ಬರುತ್ತಿದ್ದ ಕುವೆಂಪುರವರ ಗೀತೆಗಳು ನಮ್ಮನ್ನು ಮೌನವಾಗಿರಲು ಒತ್ತಾಯಿಸುತಿತ್ತು. ಅಲ್ಲಿಂದಲೂ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಕುವೆಂಪುರವರು ಬಳಸುತ್ತಿದ್ದ ಮೇಜು ಕುರ್ಚಿಗಳು ಕವಿಗಾಗಿ ಕಾದು ಮೂಕವಾಗಿ ಕುಳಿತಿದ್ದವು. ಕಿಟಕಿಯಿಂದ ಹೊರಗಿಣುಕಿದರೆ ಕುಂದಾದ್ರಿಯ ರಮಣೀಯ ನೋಟ..
ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿದ್ದರೂ ಮೌನವೇ ಮಾತಾಗಿತ್ತು. ಸಿಬ್ಭಂದಿಗಳು ಅಗತ್ಯ ಬಿದ್ದಲ್ಲಿ ಮೆಲುದನಿಯಲ್ಲಿ ವಿವರಿಸುತ್ತಿದ್ದರು. ಅವರ ಆತ್ಮೀಯತೆ, ಸ್ವಚ್ಚತೆಯ ಬಗೆಗಿನ ಕಾಳಜಿ ಮನಸ್ಸಿಗೆ ಮುದ ನೀಡಿದವು. ಇಲ್ಲಿ ಕುವೆಂಪುರವರ ಪುಸ್ತಕಗಳು ರಿಯಾಯಿತಿಯ ಬೆಲೆಯಲ್ಲಿ ದೊರೆಯುತ್ತವೆ.
ಅಲ್ಲಿಂದ ಹೊರ ಬಂದು 'ಕವಿಶೈಲ ' ದತ್ತ ಸಾಗಿದೆವು. ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿದ ಹಸಿರು ತುಂಬಿದ ಸುಂದರ ಬೆಟ್ಟ. ಬೃಹದಾಕಾರದ ಬಂಡೆಗಳನ್ನು ಪೇರಿಸಿ ಮಾಡಿದ್ದ ರಚನೆಗಳು, ಬದಿಗಳಲ್ಲಿ ಅಮೃತ ಶಿಲಾ ಪಲಕಗಳಲ್ಲಿ ಕೊರೆದಿದ್ದ ಕುವೆಂಪುರವರ ಕವಿತೆಗಳು " ಓ ನನ್ನ ಪ್ರಿಯತಮ ಶಿಖರ ಸುಂದರನೆ"ಎಂಬ ಕವಿ ನುಡಿ ಅಲ್ಲಿಗೆ ಅನ್ವರ್ಥವಾಗಿತ್ತು. ಸುಮ್ಮನಿದ್ದರೂ ಮನ ಅದನ್ನೇ ಮೆಲುಕು ಹಾಕುತಿತ್ತು. ಅಲ್ಲಿನ ಸೂರ್ಯಾಸ್ತ ವಂತೂ ಅದ್ಭುತ ಕಾವ್ಯವೇ ಸರಿ. ಏಳುವ ಮನಸ್ಸಿಲ್ಲದಿದ್ದರೂ ಕತ್ತಲಾವರಿಸಿ ನಮ್ಮನ್ನು ಹೊರದೂಡಿತು. ಕೆಳಗಿಳಿದು ಬರುವಾಗಲೂ " ಮಿತ್ರರೇ ಮಾತಿಲ್ಲಿ ಮೈಲಿಗೆ! ಸುಮ್ಮನಿರಿ ಮೌನವೇ ಮಹತ್ತಿಲ್ಲಿ " ಎಂಬ ಕುವೆಂಪುರವರ ನುಡಿಯಂತೆ ಮನದುಂಬಿ ಬಂದು ಮಾತು ತಣ್ಣಗೆ ಮಲಗಿತ್ತು

ಹೆಜ್ಜೆ ಗುರುತು



ನೋಡು ಗೆಳೆಯಾ 
ಈಗಷ್ಟೇ ನೀನಿಟ್ಟ ಹೆಜ್ಜೆಯ ಗುರುತುಗಳೆಲ್ಲಿ ..... ?
ಕಳ್ಳ ಕಡಲು ಕದ್ದು ಬಿಟ್ಟಿತೇ ..... ? 
ಮತ್ತೆ ಮತ್ತೆ ತನ್ನೊಳ ಹೊಕ್ಕು ಅದನ್ನೊಮ್ಮೆ 
ಕಣ್ತುಂಬ ನೋಡಿ ಬಚ್ಚಿಟ್ಟು ಬರುವ
ರಭಸದಲೆಗಳು ಕಾಣಿಸದೆ ನಿನಗೆ.. ?
ಯಾವುದನ್ನೂ ಒಡಲೊಳಗೆ ಉಳಿಸಿಕೊಳ್ಳದೆ
ಮರಳಿ ತೀರಕ್ಕೆಸೆದು ಬಿಡುವ ಕಡಲು 
ನಿನ್ನ ಹೆಜ್ಜೆ ಗುರುತುಗಳನ್ನು ನನಗೆ ತಂದು ಕೊಡಬಹುದೇ .... ?

ಕರಿ ಬೇವಿನ ಸೊಪ್ಪು




"ಅಕ್ಕಾ...ಈ ಅತ್ತೆ ಯಾವಾಗಲು ನಿಧಾನ ಸ್ವಲ್ಪ ಬೇಗ ಎದ್ದು ಹೊರಡ್ಬಾರ್ದಾ.. ನನಗಂತೂ ಹೇಳಿ ಹೇಳಿ ಸಾಕಾಯ್ತು ಇನ್ನು ತಡ ಆಯ್ತು ಅಂತ ಅಣ್ಣನ ಕೈಯಲ್ಲಿ ನಾವು ಬಯ್ಸಿಕೊಳ್ಬೇಕು" ನಿಮ್ಮಿ ಹೇಳ್ತಾ ಇರೋ ಮಾತೆಲ್ಲ ನನ್ನ ಕಿವಿಗೆ ಬೀಳ್ತಾ ಇತ್ತು.ನಾನಾದರು ಏನು ಮಾಡ್ಲಿ ಪ್ರತಿಯೊಂದನ್ನೂ ಈ ಮಕ್ಕಳಿಗೆ ಕೈಯಲ್ಲಿ ಹಿಡಿಸಿ ಕೊಟ್ಟೆ ಆಗ್ಬೇಕು.ಹುಂ ಮಕ್ಕಳು .. ನನಗಿನ್ನೂ ಇವರು ಪುಟ್ಟ ಮಕ್ಕಳೇ ಆದ್ರೆ ಅವರಾಗಲೇ ರೆಕ್ಕೆ ಬಲಿತು ಹಾರಿ ಬೇರೆ ಗೂಡು ಸೇರಿ ಆಗಿತ್ತು. ಗಂಡ ಬಿಟ್ಟವಳೆಂಬ ಕಳಂಕ ಹೊತ್ತೇ ಪುನ ತವರು ಮನೆಯ ಕಡೆ ಕಾಲಿರಿಸಿದ್ದು. ನಾನಾದರು ಏನು ಮಾಡುವಳಿದ್ದೆ.ನಿಮ್ಮ ಕೆಲಸದವಳಾಗಿಯಾದರು ಇರ್ತೀನಿ,  ನನ್ನ ಹೊರ ಹಾಕಬೇಡಿ ಎಂದು ಕಾಲು ಹಿಡಿದು ಕೇಳಿ ಕೊಂಡಿದ್ದರೂ ಮಕ್ಕಳನ್ನು ಹೆರದ ಬಂಜೆ ಎಂಬ ಪಟ್ಟ ಕಟ್ಟಿ ಹೊರ ತಳ್ಳಿ ಕೈ ತೊಳುದು ಕೊಂಡಿದ್ದ ಗಂಡನ ಮನೆಯವರು. ಒಡ ಹುಟ್ಟಿದ ಅಣ್ಣ ಕಹಿ ಗುಳಿಗೆ ನುಂಗಿದ ಮುಖ ಮಾಡಿಕೊಂಡೆ ಬರ ಮಾಡಿಕೊಂಡಿದ್ದ. ಆದರೆ ಅತ್ತಿಗೆ ಒಂದು ದಿನವೂ ನನ್ನ ಬಗ್ಗೆ ಕೆಟ್ಟದಾಗಿ ನಡೆದು ಕೊಂಡಿರಲಿಲ್ಲ. ಆದರೆ ದೇವರಿಗ್ಯಾಕೆ ಒಳ್ಳೆಯವರೆಂದರೆ ಪ್ರೀತಿಯೋ ಬೇಗನೆ ತನ್ನ ಬಳಿ ಕರೆಸಿ ಕೊಂಡಿದ್ದ. ಮೂರು ಪುಟ್ಟ ಮಕ್ಕಳು. ನನ್ನ ಮಡಿಲಿಗೆ ಬಂದಿದ್ದವು. ನಾನು ಹೆರದಿದ್ದರೂ ತಾಯಿಯಾಗಿದ್ದೆ. ಅಣ್ಣನೂ ನನ್ನ ಬಗ್ಗೆ ಪ್ರೀತಿ ತೋರದಿದ್ದರೂ ಅಸಹನೆ ಕಾರುವುದನ್ನು ಬಿಟ್ಟಿದ್ದ.  ಮಕ್ಕಳ ಮೇಲೆ ತಾನೆಷ್ಟು ಒಲವು ತೋರಿದರೂ ಅವರ ತಂದೆಯ ಬಳಿ ಇರುವ ಸಲಿಗೆ ನನ್ನ ಬಳಿ ಇರಲೇ ಇಲ್ಲ. ನಾನು ಅದನ್ನು ಬಯಸಲೂ ಇಲ್ಲ. ಮದುವೆ ಮುಂಚಿನ ನನ್ನದೆ ಮನೆಯಲೀ ನಾನು ಹೊರಗಿನವಳಾಗೆ ಜೀವನ ನಡೆಸುತ್ತಿದ್ದೆ. 

ಹೆಣ್ಣು ಹುಡುಗಿಯರಿಬ್ಬರಿಗೂ ಮದುವೆ ಆಗಿತ್ತು. ಒಳ್ಳೆಯ ಮನೆಯನ್ನೇ ಸೇರಿದ್ದರು.ಅವರ ಬಾಣಂತನದ ಸಂಭ್ರಮವೂ ನನ್ನಿಂದಲೇ ನಡೆದಿತ್ತು.  ಇಂದು ಸಂತೋಷನ ಮದುವೆ. ಮದುವೆ ಛತ್ರಕ್ಕೆ ಹೊರಡುವ ಸಡಗರ.  ಹೊರಗಿನಿಂದ "ಅತ್ತೇ"   ಎಂಬ ನಿಮ್ಮಿಯ ಸ್ವರ ಕೇಳಿದಾಗಲೇ ಇಹಲೋಕಕ್ಕಿಳಿದದ್ದು. ಒಂದು ಸೀರೆ ಉಡುವಷ್ಟು ಹೊತ್ತು ಎಡೆ ಕೊಡದ ಇವಳು, 'ಬರುವುದಿಲ್ಲ ನೀವೇ ಹೋಗಿ, ನಾನು ಮನೆಯಲ್ಲಿದ್ದೆ ಇಲ್ಲಿನ ಕೆಲಸ ಮಾಡಿಸುತ್ತೇನೆ' ಎಂದರೆ ಅದಕ್ಕೂ ಒಪ್ಪದೇ "ಸಾಕು ನೀವು ಕೆಲಸ ಮಾಡಿಸೋದು. ಸುಮ್ಮನೆ ಹೇಳಿದಷ್ಟು  ಕೇಳಿ " ಎಂದಿದ್ದಳು.  ದಾರಿಯುದ್ದಕ್ಕೂ ನನ್ನನ್ನು ಬಯ್ಯುತ್ತಲೇ   ಇದ್ದ ಅವಳ ಮಾತು ಕಿವಿಗೆ ಬೀಳಲೇ ಇಲ್ಲ ಎನ್ನುವಂತೆ ಕಾರಿನಿಂದ ಹೊರಗೆ ದೃಷ್ಟಿ ಹಾಯಿಸಿದೆ.

 ಮದುವೆ ಹಾಲ್ ಸಿಂಗಾರ ಗೊಂಡಿತ್ತು. ಹುಡುಗನ ಕಡೆಯವರಾದ ನಮ್ಮನ್ನು ಹಾರ್ದಿಕವಾಗಿ ಬರ ಮಾಡಿಕೊಂಡು ಸತ್ಕಾರ ನಡೆಸಿದರು. ನಿಮ್ಮಿ , ವಿನುತ ಆಗಲೇ ಗಂಡಿನ ಕಡೆಯವರಿಗೆ  ಮೀಸಲಿಟ್ಟ ಕೋಣೆ ಸೇರಿ ಆಗಿತ್ತು. ನಾನು ಪುನಃ ಸೀರೆ ಉಡುವ ಕೆಲಸ ಇಲ್ಲದಿದ್ದರೂ ಅವರ ಹಿಂದೆಯೇ ನಡೆದೆ."ಅಬ್ಬ ಜೊತೆಗೆ ಬಂದಿರಲ್ಲ . ಇನ್ನು ನಿಮ್ಮನ್ನು ಹುಡುಕಿ ಕೊಂಡು ಪುನಃ ಎಲ್ಲಿ ಅಲೀಬೇಕಾಗುತ್ತೆ ಅಂದ್ಕೊಂಡೆ" ಎಂದು ನಿಮ್ಮಿ ಹೇಳಿದರೆ ವಿನುತ ಓರೆ ಮುಖ ಮಾಡಿ ನಕ್ಕಳು. ನಾನೇನಪ್ಪ ಇಲ್ಲಿಗೆ ಬರಲೇ ಬೇಕಾದ್ದು  ಎಂದು ಪ್ರಶ್ನಾರ್ಥಕ ಚಿನ್ಹೆ ಮಾಡಿ ಅವರೆಡೆಗೆ ನೋಡಿದರೆ, "ಮುಹೂರ್ತದ ಹೊತ್ತಿಗೆ ನೀವು ಇಲ್ಲೆ ಇರಿ ಹೊರಗೆ ಬರಬೇಡಿ. ಇಲ್ಲಿರುವ ನಮ್ಮ ಸಾಮಾನು ಸೀರೆ ಒಡವೆ ಎಲ್ಲಾ ಜಾಗ್ರತೆ ಇರಬೇಡವೇ?" ಎಂದಳು. ನನ್ನನ್ನು ಒತ್ತಾಯಿಸಿ ಕರೆದುಕೊಂಡು ಬಂದಿದ್ದರ ಕಾರಣ ಈಗ ಗೊತ್ತಾಯಿತು." ಅಕ್ಕಾ ಸಾಂಬಾರು ತುಂಬಾ ರುಚಿಯಾಗಿತ್ತಲ್ವೇನೆ? ಆದ್ರೆ ಅಷ್ಟೊಂದು ಕರಿ ಬೇವಿನ ಸೊಪ್ಪು ಯಾಕೆ ಹಾಕಿದ್ರೋ. ಪಕ್ಕಕ್ಕಿಡೋದೇ ಕೆಲಸ ಆಯ್ತು".  "ಹೂಂ ಕಣೆ" ...  ಎಂದ   ವಿನುತ ನನ್ನನ್ನು ಸರಿಸಿಕೊಂಡೆ ಹೊರಗಡಿಯಿಟ್ಟಳು. 

ಈ ಸಂಸಾರಕ್ಕೆ ನನ್ನ ಅಗತ್ಯ ಇದೆಯೆ? ಇಲ್ಲವೆ? ನಾನು ಒಬ್ಬಳು ಭಾವನೆಗಳಿರುವ ಮನುಷ್ಯಳು ಅಂತ ಯಾಕೆ ಇವರಿಗೆ ಅನ್ನಿಸೋದೇ ಇಲ್ಲ. ನಾನೇ ಎತ್ತಿ ಆಡಿಸಿದ ಅಣ್ಣನ ಮಗನ ಮದುವೆ ನೋಡುವ ಬಯಕೆ ನನ್ನಲ್ಲೂ ಇಲ್ಲವೆ?ಇದ್ದು ಇಲ್ಲದಂತಿರುವ ನನ್ನ ಬದುಕಿಗೂ  ಮತ್ತು ಸಾಂಬಾರಿನೊಳಗೆ ಬೆರೆತೂ, ತುತ್ತಿನೊಡನೆ ಬಾಯಿಗೆ ಸಿಕ್ಕಿದರೆ ಕಸದಂತೆ ಹೀನಾಯಿಸಿ   ಬದಿಯಲ್ಲಿಡುವ ಕರಿ ಬೇವಿನ ಸೊಪ್ಪಿಗೂ  ಸಾಮ್ಯತೆ ಇದೆಯೆಂದು ನನಗಾಗಲೇ ಅನಿಸಿದ್ದು . ..
  



ಕನ್ನಡಕ ಪುರಾಣ


 ಚಿಕ್ಕವಳಾಗಿದ್ದಾಗಿನಿಂದ  ನನಗೆ ಅತ್ಯಂತ ಕುತೂಹಲದ ಮತ್ತು ನನ್ನ ಕೈಗೆ ಸದಾ ನಿಲುಕದಷ್ಟು ಎತ್ತರದಲ್ಲಿರುತ್ತಿದ್ದ ವಸ್ತು ಎಂದರೆ ಅಜ್ಜನ ಕನ್ನಡಕ. ಕೇವಲ ಪೇಪರ್ ಓದಲು ಮಾತ್ರ ಬಳಸಲ್ಪಡುತ್ತಿದ್ದ ಅದು  ಕೂಡಲೇ  ಕನ್ನಡಕದ ಗೂಡು ಎಂಬ ಗೂಡಿನ ಬಾಗಿಲೆಳೆದುಕೊಂಡು ನನ್ನ ಕಣ್ಣಿಂದ ಮರೆಯಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಅಜ್ಜ ಮರೆತು ಕೆಳಗಿಟ್ಟ ದಿನ ಅದನ್ನು ಕಣ್ಣಿಗೆ ಏರಿಸಿ ನಡೆಯುವ ಅನುಭವವೇ ಅದ್ಭುತ. ನೆಲ ಇನ್ನಷ್ಟು ತಗ್ಗಿನಲ್ಲಿದ್ದಂತೆ ತೋರಿ ಆ ಅಂದಾಜಿಗೆ ಕಾಲಿಡುವಾಗ ಮೊದಲೇ ನೆಲ ಕಾಲಿಗೆ ತಾಗಿ ಮುಗ್ಗರಿಸುವಂತೆ ಮಾಡುತ್ತಿತ್ತು. ಮತ್ತೊಂದು ರಜೆಗೆ ಅಜ್ಜನ ಮನೆಗೆ ಹೋದಾಗ ಅದು ಕೈ ಜಾರಿ ಬಿದ್ದು ಅದರ ಕನ್ನಡಿ ಹುಡಿಯಾಗಿತ್ತು.ಹೊಸದರ ಅಗತ್ಯವಿಲ್ಲ ಎಂದು ಅಜ್ಜ ಅದರ ಫ್ರೇಮ್ ತೆಗೆದಿರಿಸಿದ್ದರು. ಅದಕ್ಕೆ ಪಾರದರ್ಶಕ ಪ್ಲಾಸ್ಟಿಕ್ ಅಂಟಿಸಿ ಕುಣಿದದ್ದೇ ಕುಣಿದದ್ದು . ಆದರೂ ಅದು ಎತ್ತರ ತಗ್ಗಿನಲ್ಲಿ ನಡೆದಾಡುವ ಅನುಭವ ನೀಡದೆ ಬೇಗನೆ ಬೇಸರ ತರಿಸಿತು. 
 ನಂತರ ಶಾಲೆಗೆ  ಹೋಗುವ ದಿನಗಳಲ್ಲಿ, ಅಂದರೆ ಅದೂ ಹೈಸ್ಕೂಲಿನ ಮೆಟ್ಟಿಲೇರಿದ ಮೇಲೆ ಕೇವಲ ಉಪಾಧ್ಯಾಯರ ಮೂಗಿನ ಮೇಲೆ ರಾರಾಜಿಸುತ್ತಿದ್ದ ಕನ್ನಡಕ, ತಲೆ ನೋವಿನ ಕಾರಣಕ್ಕೆ ಹುಡುಗಿಯೊಬ್ಬಳ ಮೂಗನ್ನು ಅಲಂಕರಿಸಿತು. ಬೇರೆಯ ತರಗತಿಯ ಹುಡುಗಿಯಾಗಿದ್ದರೂ ನಾನಾಗಿ ಮೇಲೆ ಬಿದ್ದು ಅವಳ  ಸ್ನೇಹ ಗಳಿಸಿಕೊಂಡಿದ್ದೆ. ಅವಳು ಕನ್ನಡಕ ಏರಿಸಿದಾಗ ಅದರೊಳಗೆ  ಮಿಣುಗುಟ್ಟುವ ಕಣ್ಣುಗಳ ಸೌಂಧರ್ಯ, ಅದನ್ನು ಹಾಕಿಕೊಂಡಾಗಿನ ಗತ್ತು, ಗೈರತ್ತು ಬೇರೆಲ್ಲಿತ್ತು..?ಆ ಹಾಳು ತಲೆನೋವು ನನಗಾದರೂ ಬರಬಾರದೇ ಎಂದು ಇದ್ದಬದ್ದ ದೇವರನ್ನೆಲ್ಲ ಬೇಡಿಕೊಂಡಿದ್ದೆ. ಆದರೆ ದೇವರಿಗೆ ಕಿವಿ ನೋವಿತ್ತೇನೋ .. ನನ್ನ ಮೊರೆ ಕೇಳಿಸಲೇ ಇಲ್ಲ. 
ಆಗ ನೋಡಿ! ನನ್ನಾಸೆ ಬಳ್ಳಿಗೆ  ನೀರೆರೆಯಲು ಕಾಲಿಟ್ಟಿತ್ತು  ಕೆಂಗಣ್ಣು. ಮದ್ರಾಸ್ ಐ ಎಂಬ ನಾಮದೇಯ ಹೊತ್ತಿದ್ದರೂ, ಕನ್ನಡ ಪ್ರಿಯೆಯಾದ ನಾನು ಅದನ್ನು ಕ್ಷಮಿಸಿ ಸ್ವಾಗತಿಸುವ ತಯಾರಿ  ನಡೆಸಿದ್ದೆ. ಊರಿಗೆ ಬಂದವಳು, ನೀರಿಗೆ ಬಾರದಿದ್ದಾಳೆ ..? ಎಂಬ ನುಡಿಯ ಮೇಲೆ ನಂಬಿಕೆ ಇಟ್ಟು. ಆದರೆ ಇಡೀ ಊರಲ್ಲಿ ಎಲ್ಲರಿಗೂ ಬಂದರೂ, ನನಗೆ ಬಾರದ ಆ ಕಾಯಿಲೆ,  ಅದರ ಸಂಕ್ರಾಮಿಕತೆಯೇ ಬಗ್ಗೆ ನನ್ನಲ್ಲಿ  ಅನುಮಾನ ಹುಟ್ಟಿಸಿತು . ಕಪ್ಪು ಕನ್ನಡಕದಾರಿಗಳಾಗಿ ಸುಂದರಿಯರಾಗಿ ಕಾಣಿಸುತ್ತಿದ್ದ ನನ್ನ ಅನೇಕ ಗೆಳತಿಯರು ನನ್ನಲ್ಲಿ ಅಸೂಯೆ ಹೆಚ್ಚಿಸಿದ್ದು ಸುಳ್ಳಲ್ಲ. ಅಂತೂ ಇಂತೂ ನನ್ನ ಮೇಲೆ ಕರುಣೆ ತೋರದ ಆ ಪಾಪಿ ಕಾಯಿಲೆ ಊರಿಂದ ಕಾಲ್ಕಿತ್ತಿತು.
ಕಾಲೇಜಿನ ದಿನಗಳು  ನಮ್ಮೆಲ್ಲ ಅಲಂಕಾರಕ್ಕೆ ಅಡ್ದಿ ಮಾಡದ ಕಾಲವೆಂದೇ ತಾನೇ ಪ್ರಸಿದ್ಧಿ ..! 'ಸ್ಪೋರ್ಟ್ಸ್ ಡೆ' ಎಂಬ ಒಂದು ದಿನವನ್ನು ನನ್ನ ಆಸೆ ತೀರಿಸುವ ದಿನವಾಗಿ ಆಯ್ಕೆ ಮಾಡಿದೆ. ತಂಪು ಕನ್ನಡಕ ಕಣ್ಣಿಗೇರಿಸಿ ನೂರಾರು ಬಾರಿ ಕನ್ನಡಿಯ ಮುಂದೆ ಸುಳಿದು ನನ್ನ ಅಂದಕ್ಕೆ ನಾನೇ ಬೀಗಿ ಕಾಲೇಜಿನ ದಾರಿ ಹಿಡಿದೆ. ಒಳಗೆ ಕಾಲಿಡುವಾಗಲೇ ಪರಿಚಿತ ಪ್ರಾಧ್ಯಾಪಕರೊಬ್ಬರು ಸಿಕ್ಕಿ " ಅಯ್ಯೋ ..! ಏನಮ್ಮಾ ..! ಕಣ್ಣು ನೋವು ಬಂದಿದೆಯೇ ? ಇವತ್ಯಾಕಮ್ಮಾ ಬಂದೆ? ಹೇಗೂ ಪಾಠ ಇಲ್ಲ,  ಹೋಗು....  ಹಾಸ್ಟೆಲ್ ಗೆ ಹೋಗಿ ರೆಸ್ಟ್ ಮಾಡು...  ಅದು ಗುಣ ಆಗಲಿ, ಜೋರಾದ್ರೆ ಕಷ್ಟ, ಜೊತೆಗೆ ಎಲ್ಲರಿಗೂ ಹರಡಿ ಬಿಡುತ್ತೆ .ಎಂದೆಲ್ಲ ಜೋರಾಗಿ ಹೇಳಿ ಎಲ್ಲರ ಗಮನವನ್ನೂ ನನ್ನಡೆಗೆ ಸೆಳೆದರು. ಇದು ಬಿಸಿಲಿಗೆ  ಅಂತ ತಂಪು ಕನ್ನಡ ಹಾಕಿದ್ದು ಅಂತೆಲ್ಲ ಅವರೆದುರು ಹೇಳಲು ಸಾಧ್ಯವೇ..?ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಮರಳಿ ಹಾಸ್ಟೆಲ್ ಹಾದಿ ಹಿಡಿದೆ. 
ಮದುವೆ ನಿಶ್ಚಯವಾದಾಗ ನನ್ನ ಪತಿಯಲ್ಲಿದ್ದ ಸ್ಕೂಟರ್ ಮೊದಲು ನನ್ನ ಕಣ್ಣಿಗೆ ಬಿತ್ತು. ಅಲ್ಲಿಂದ ಸುರುವಾಯ್ತು ನೋಡಿ ನನ್ನ ಕನಸುಗಳ ಸರಮಾಲೆ. ಎಲ್ಲರೂ ಭಾವಿ ಪತಿಯ ಬಗ್ಗೆ ಕನಸು ಕಾಣುವವರಾದರೆ, ನಾನು  ಸ್ಕೂಟರಿನಲ್ಲಿ   ಕನ್ನಡಕ ಹಾಕಿಕೊಂಡು ಹೋಗುವ ಬಗ್ಗೆ ಕನಸು ಕಾಣುತ್ತಿದ್ದೆ. ಮದುವೆ ಕಳೆದು ನಾನು ಮೊದಲ ಬಾರಿ ಪತಿಯೊಡನೆ ಸ್ಕೂಟರ್ ಏರುವ ಅಮೃತ ಗಳಿಗೆ ಸಮೀಪಿಸಿತು. ಆದರೆ ನನ್ನ  ಖಾಲಿ  ತಲೆಯ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನನ್ನ ಪತಿರಾಯ ದಪ್ಪನೆಯ ಗ್ಲಾಸ್ ಹೊಂದಿದ್ದ ಹೆಲ್ಮೆಟನ್ನು ನನ್ನ ತಲೆಯ ಮೇಲೆರಿಸಬೇಕೆ.. !! ಹ್ಹಾ..!! ವಿಧಿಯಾಟವೇ...!! ಎಂದು ಹೆಲ್ಮೆಟ್ ನ ಮೇಲೆಯೆ ತಲೆ ತಲೆ ಬಡಿದುಕೊಂಡೆ. 
ಈಗಲೂ ನನ್ನಾಸೆ ಕುಂದಿಲ್ಲ. ಇನ್ನೇನು ಕೆಲವೇ ವರ್ಷಗಳು .. ಆಗ ಬರುವ 'ಚಾಲೀಸು'  ನನ್ನ ಕಣ್ಣಿಗೆ  ಕನ್ನಡಕ  ಏರಿಸದೆ ಇರಲಾರದು.ಆದರೆ ಇಲ್ಲೂ ಒಂದು ಭಯದ ನೆರಳಿದೆ. ಚಾಲೀಸು ಗುಣಿಸು ಎರಡರಷ್ಟು ವಯಸ್ಸಾದ ನನ್ನ ಅಜ್ಜಿ  ಕಣ್ಣಿನಿಂದ ಒಂದು ಅಡಿ ದೂರದಲ್ಲಿ ಪುಸ್ತಕ ಹಿಡಿದು ದೊಡ್ಡ ಸ್ವರದಲ್ಲಿ ಒಂದೂ ತಪ್ಪದಂತೆ ಓದುತ್ತಿದ್ದರು, ಯಾವುದೇ ಕನ್ನಡಕದ ನೆರವಿಲ್ಲದೆ. ಸಧ್ಯ ನನಗೆ ಹಾಗಾಗದೆ ಇರಲೆಂದು ಪ್ರಾರ್ಥಿಸುತ್ತಾ,ಸುಂದರ ಕನ್ನಡಕ ನನ್ನ ಮೂಗೇರುವ  ಶುಭ ಗಳಿಗೆಯನ್ನು  ಶಬರಿಯಂತೆ ಕಾಯುತ್ತ ಇದ್ದೇನೆ, ಕನ್ನಡಕ ಒರೆಸುವ ಶುಭ್ರ ಹತ್ತಿ ಬಟ್ಟೆಯನ್ನು ಕೈಯಲ್ಲಿ ಹಿಡಿದು ....