Anitha Naresh Manchi

Friday, February 18, 2011

ಮನದಾಳ


ದಟ್ಟ ಕಾಡಿನ ನಡುವಿನ ಕತ್ತಲ ಹಾದಿ. ಕಾರಿನ ಹೆಡ್ ಲೈಟಿನ  ಬೆಳಕಿಗೆ ಬದಿಯ ಮರಗಳೆಲ್ಲ ಚಿತ್ರ ವಿಚಿತ್ರಾಕಾರ ತಾಳಿ ನಿಂತಂತೆ ಅನ್ನಿಸುತಿತ್ತು. ಕಾರು ನಿಧಾನ ಗತಿಯಲ್ಲಿ ಸಾಗುತಿತ್ತು. ಮುಂದುಗಡೆ ಸ್ವಲ್ಪ ಏರು ಹಾದಿಯಂತೆ ಕಂಡಿತು. ಡ್ರೈವರ್ ಸೀಟಿನಲ್ಲಿ ಕುಳಿತಿದ್ದ ರಾಯರು  ಯಾಕೋ ಆತಂಕಗೊಂಡಂತೆ ಕಂಡಿತು. ತಟ್ಟನೆ ಬದಿಯಿಂದ ಒಂದು ದೊಡ್ಡ ಚಿರತೆ ಬಂದು ಕಾರಿನ ಕಿಟಕಿಯ ಮೇಲೆ ಎರಡೂ ಕಾಲೂರಿ ಗರ್ಜಿಸಿತು. ರಾಯರ ಇಡೀ ಮೈ ಭಯದಿಂದ ನಡುಗಿ ಜೋರಾಗಿ ಕಿರುಚಲು ಬಾಯಿ ತೆರೆದರು. ಪಕ್ಕನೆ ಎಚ್ಚರವಾಯಿತು. ಹತ್ತಿರದಲ್ಲಿ ಮಲಗಿದ್ದ ಜಾನಕಮ್ಮ ರಾಯರನ್ನು ಅಲುಗಿಸಿ  "ಏನಾಯಿತು ರ್ರೀ .. ಯಾಕೋ ನರಳಿದಂತೆ ಕೇಳಿಸಿತು" ಎಂದರು. ರೂಮಿನಲ್ಲಿ  ಜೋರಾಗಿ ಫ್ಯಾನ್ ತಿರುಗುತ್ತಿದ್ದರೂ ರಾಯರ  ಮೈ ಬೆವೆತು ಒದ್ದೆಯಾಗಿತ್ತು. ಏನೂ ಮಾತನಾಡಲಾರದೆ ರಾಯರು " ಏನೂ ಇಲ್ಲ ಕಣೆ ಯಾಕೋ ಎಚ್ಚರವಾದಂತಾಯಿತಷ್ಟೇ ನೀನು ಮಲಗು" ಎಂದು ಮೆಲ್ಲನೆದ್ದು  ಬದಿಯಲ್ಲಿದ್ದ ನೀರ ಹೂಜಿಯಿಂದ ಗಟ ಗಟನೆ ನೀರು ಕುಡಿದರು .ಯಾಕೆ ಈ ಕನಸು  ದಿನಾಲೂ ನನ್ನ ಮನಶ್ಯಾಂತಿ ಹಾಳು ಮಾಡುತ್ತದೆ.. ನಿದ್ದೆ ಮಾಡುವುದೆಂದರೆ ಹೆದರಿಕೆ ಆಗುವಂತಾಗಿದೆ. ಯಾಕೋ ಯಾರೊಂದಿಗೂ ಇದನ್ನು ಹೇಳಿ ಕೊಳ್ಳಲು ಮುಜುಗರವೆನಿಸುತಿತ್ತು. ನಾಳೆಯೇ ಇದಕ್ಕೇನಾದರೂ ಪರಿಹಾರ ಹುಡುಕಿಯೇ ತೀರಬೇಕೆಂದು ಕೊಂಡರು. ರಿಟೈರ್ಡ್  ಆಗಿ ಕೆಲ ಕಾಲವಾಗಿತ್ತು. ಸಂಜೆ ವಾಕ್ ಮಾಡುತ್ತಾ ತಮ್ಮ ಮಕ್ಕಳ ಸುದ್ದಿ, ಮನೆ ಸುದ್ದಿ, ಕಾಯಿಲೆ ಕಸಾಲೆಗಳ ಸುದ್ದಿ ಇತ್ಯಾದಿಗಳನ್ನು ರಂಗು ರಂಗಾಗಿ ವರ್ಣನೆ ಮಾಡುತ್ತಾ ಎಲ್ಲಾ ಕಷ್ಟ ಸುಖ ಗಳನ್ನು ಹಂಚಿ ಕೊಳ್ಳುವ ಉತ್ತಮ ಸ್ನೇಹಿತರ ವರ್ಗ ರಾಯರ ಪಾಲಿಗಿತ್ತು.ಅವರ ಬಳಿ ಹೇಳುವುದೇ ಉತ್ತಮ ಎಂದು ಮನ ನುಡಿಯಿತು.  ಮತ್ತೆ ಯಾವಾಗ ನಿದ್ದೆ ಸುಳಿಯಿತೋ ತಿಳಿಯಲಿಲ್ಲ.ಪತ್ನಿ ಬಂದು ಇನ್ನೂ " ಮಲ್ಗೆ ಇದ್ದೀರಾ.. ಯಾಕೆ ಏನಾಯ್ತು" ಎಂದಾಗಲೇ ಎಚ್ಚರವಾಗಿದ್ದು. ಏನೊಂದೂ ಮಾತನಾಡದೆ ಮೆಲ್ಲನೆದ್ದು ಹೊರ ನಡೆದ ರಾಯರನ್ನು ಕಂಡು ಅವರ ಪತ್ನಿಗೆ ಯಾಕೋ ಕಸಿವಿಸಿಯಾಯಿತು. ಸದಾ ಬೇಕಿದ್ದರೂ, ಬೇಡದಿದ್ದರೂ ಮಾತನಾಡುತ್ತಿದ್ದ ರಾಯರ ಈ ಹೊಸ ರೂಪ ಮನೆಯ ಸದಸ್ಯರಿಗೆ ಆತಂಕ ತಂದಿತು. ಆದರೆ  ತಮ್ಮ  ಕನಸಿನ ಚಿಂತೆಯಲ್ಲೇ ಇನ್ನೂ ಮುಳುಗಿದ್ದ ರಾಯರಿಗೆ,  ಯಾಕೋ ಇಂದು ಬೇಗನೆ ಸಂಜೆಯೂ ಆಗುವುದಿಲ್ಲವೇನೋ ಎಂಬ ಭಯ  ಕಾಡ ತೊಡಗಿತು. ಎಷ್ಟು  ಬಾರಿ ಗಂಟೆ  ನೋಡಿದರೂ ಸಾಕಾಗಲಿಲ್ಲ. ಮೇಜಿನ ಮೇಲೆ ತಾವು ಓದಿ ಅರ್ಧಕ್ಕೆ ನಿಲ್ಲಿಸಿದ್ದ ಪುಸ್ತಕ ಕಣ್ಣಿಗೆ ಬಿತ್ತು. ಅದನ್ನೆತ್ತಿಕೊಂಡು ಓದ ತೊಡಗಿದರೂ  ಒಂದಕ್ಷರವೂ ತಲೆಯೊಳಗಿಳಿಯಲಿಲ್ಲ . ಕನಸಲ್ಲಿ ಮೃತ್ಯುವಾಗಿ ಕಾಡಿದ ಚಿರತೆಯ ಕೆಂಪನೆಯ ಕಣ್ಣುಗಳೇ ಅಕ್ಷರ ರೂಪದಲ್ಲಿ ಬಂದಂತಾಗಿ ಅದನ್ನೆತ್ತಿ ಪಕ್ಕಕ್ಕಿಟ್ಟರು. ಅಂತೂ ಇಂತೂ ಸಂಜೆ ನಾಲ್ಕು ಗಂಟೆ ಹೊಡೆಯುವುದು ಕೇಳಿದ ಕೂಡಲೇ ಕಾಲಿಗೆ ಷೂ ಏರಿಸಿ , "ಇವತ್ತು ಮೈಯಲ್ಲಿ ಆರಾಮಿಲ್ಲದಿದ್ರೆ ಹೊರಗ್ಯಾಕೆ ಹೋಗ್ತೀರಿ" ಎನ್ನುವ ಪತ್ನಿಯ ಮಾತುಗಳು ಕೇಳಿಸಲೇ ಇಲ್ಲವೇನೋ ಎಂಬಂತೆ ನಟಿಸಿ ವೇಗವಾಗಿ ಮನೆಯಿಂದ ಹೊರ ಬಿದ್ದರು.
 
ಅವರು ಯಾವಾಗಲೂ ಕೂರುತ್ತಿದ್ದ ಪಾರ್ಕಿನ ಬೆಂಚು ಕಾಲಿಯಾಗೆ ಇತ್ತು. ಇನ್ನೂ ಯಾರೂ ಬಂದಿರಲಿಲ್ಲ. ಪಾರ್ಕಿನಲ್ಲಿದ್ದ ಹಚ್ಚ ಹಸುರಿನ ಗಿಡ ಮರ ಬಳ್ಳಿಗಳು, ಕಂಪನ್ನು ಸೂಸುವ ಬಗೆ ಬಗೆಯ ಬಣ್ಣದ ಹೂವುಗಳು, ಸಂಜೆ ಹೊತ್ತಲ್ಲಿ ಎಲ್ಲಿಲ್ಲದ ಲವಲವಿಕೆಯಲ್ಲಿ ಚಿಲಿ ಪಿಲಿ ಗುಟ್ಟುವ ಬಾನಾಡಿಗಳು , ಹರ್ಷದಿಂದ ಕೇಕೆ ಹಾಕಿ ಆಡುವ ಚಿಣ್ಣರು ,ಇವೆಲ್ಲವೂ ಇಂದೇಕೋ ರಾಯರ ಮನಸ್ಸನ್ನು ಮುದಗೊಳಿಸಲಿಲ್ಲ. ಅಲ್ಲೇ ಆಚೆ  ಹೊರಗಿನ ರಸ್ತೆಯಲ್ಲಿ  ಕೀಲಿ  ಕೊಟ್ಟ ಆಟಿಕೆಗಳಂತೆ ಇತ್ತಿಂದತ್ತ  ಚಲಿಸುತ್ತಿದ್ದ  ವಾಹನಗಳು ರಾಯರ ಅಶಾಂತಿಯನ್ನು ಹೆಚ್ಚಿಸಿದವು. ಆ ವೇಳೆಯಲ್ಲಿ ಒಬ್ಬೊಬ್ಬರಾಗಿ ಬಂದು ಬೆಂಚು ಆಕ್ರಮಿಸಿದ ಸ್ನೇಹಿತರು ರಾಯರ ಅರಿವಿಗೆ ಬಂದದ್ದು ಅವರಲ್ಲೊಬ್ಬರು  ಬೆನ್ನು  ತಟ್ಟಿ " ಯಾಕೋ ಸುಮ್ನೆ ಮಂಕು ಬಡಿದಂಗೆ ಕೂತಿದ್ದೀಯ ಏನಾಯ್ತು" ಎಂದಾಗಲೇ. ತಿರುಗಿ ನೋಡಿದಾಗ  ಎಲ್ಲರೂ ಸೇರಿ ಆಗಿತ್ತು. ರಾಯರ  ದೃಷ್ಟಿ ಆತ್ಮೀಯರಾದ ಡಾಕ್ಟರ್ ಚೌಗಳೆ ಯವರ ಮೇಲಿತ್ತು. ಅವರು ಕಣ್ಣಲ್ಲೇ ಏನಾಯ್ತು ಎಂಬಂತೆ  ಮಿತ್ರನ ಕಡೆಗೆ ನೋಡಿದರು.ರಾಯರು ನಿಧಾನಕ್ಕೆ ತಮ್ಮ ಕನಸಿನ ಪ್ರವರ ಶುರು ಮಾಡಿದರು. ಅದರ ವರ್ಣನೆಯನ್ನೆಲ್ಲ ಮುಗಿಸಿ, ಪದೇ ಪದೇ ಬೀಳುತ್ತಿರುವ ಈ ಕನಸು ನನ್ನ ನಿತ್ಯದ ನಿದ್ರೆಯನ್ನೂ ಕಸಿದಿದೆ.ರಾತ್ರಿಯಾದಂತೆ ನಿದ್ರೆ ಬಾರದಂತಿರಲು ಪ್ರಯತ್ನ ಮಾಡುವಂತಾಗುತ್ತದೆ ಎಂದು ತಮ್ಮ ಕಷ್ಟವನ್ನು ತೋಡಿ ಕೊಂಡರು. ಮಿತ್ರರಿಗೂ ವಿಷಯ ಗಂಭೀರವೇ ಎನ್ನಿಸಿತು.  ಆದರೆ ಅದರ ಬಗ್ಗೆ  ಅಧಿಕಾರಯುತವಾಗಿ ಮಾತನಾಡಲು ಚೌಗಳೆ ಯವರೇ ಸರಿ ಎಂದು ಎಲ್ಲರೂ ಅವರ ಕಡೆಗೆ ನೋಡಿದರು. ಡಾಕ್ಟರ್ ಚೌಗಳೆಯವರು ಕೆಲವು ನಿಮಿಷಗಳ ಮೌನದ ನಂತರ ರಾಯರ ಕಡೆಗೆ ತಿರುಗಿ, ಯಾವತ್ತಿನಿಂದ ಈ ರೀತಿಯ ಕನಸುಗಳು ಬೀಳುತ್ತಿವೆ ಎಂದರು. ರಾಯರೀಗ ನಿಧಾನಕ್ಕೆ ತಮ್ಮ ನೆನಪನ್ನು ಹಿಂದಕ್ಕೊಯ್ದರು. ಆದರೂ ನಿಖರವಾಗಿ ಯಾವತ್ತಿನಿಂದ ಎಂದು ಹೇಳಲು ಸಾಧ್ಯವಾಗಲಿಲ್ಲ. ಆಗ ಚೌಗಳೆಯವರು , 'ಇರಲಿ  ಬಿಡು   ನೀನು    ಕನಸಲ್ಲಿ ಓಡಿಸುತ್ತೇನೆಂದು  ಹೇಳಿದೆಯಲ್ಲ ಆ ಕಾರಿನ ಬಣ್ಣ ನೆನಪಿದೆಯೇ' ಎಂದು ಕೇಳಿದರು. ರಾಯರಿಗೀಗ  ಅವರ ಎರಡೂ ಪ್ರಶ್ನೆಗೆ ಸಮರ್ಪಕ  ಉತ್ತರ ಹೊಳೆಯಿತು.' ಹಾಂ.. ಈಗ ನೆನಪಾಯಿತು ನೋಡು. ಇದೆಲ್ಲ ಪ್ರಾರಂಭವಾಗಿದ್ದು ಮಗ ಸುಮಂತ ಹೊಸ ಕಾರು ತಂದ ಮೇಲೆಯೆ. ಅದೇ ಕಾರನ್ನು ನಾನು ಕನಸಲ್ಲೂ ಬಿಡುತ್ತಿದ್ದುದು ಎಂದರು. ಸರಿ ಸರಿ.... ಮಗನೊಡನೆ ಎಲ್ಲಾದರೂ ದೂರ ಪ್ರಯಾಣ ಮಾಡಿದ್ದಿದೆಯೇ ಎಂದು ಡಾಕ್ಟರು ಕೇಳಿದಾಗ , ರಾಯರು ತಲೆ ಕೆರೆದು ಕೊಳ್ಳುತ್ತಾ.. ದೂರ ಅಂದ್ರೆ .. ಹುಂ .. ನನ್ನ ತಂಗಿ ಜಲಜನ ಮನೆಗೊಮ್ಮೆ ಹೋದದ್ದಿದೆ. ಅದು  ಹೆಚ್ಚು ಕಡಿಮೆ 500 ಕಿ ಮೀ ದೂರ ಎಂದರು. ಡಾಕ್ಟರು ತಮ್ಮ ಪ್ರಶ್ನಾವಳಿ ಮುಂದುವರಿಸಿ 'ಆಗ ನೀನು ಎಲ್ಲಿ ಕುಳಿತಿದ್ದೆ  ನೆನಪಿದೆಯೇ' ಎಂದರು. ಅದಕ್ಕೆ ರಾಯರು; 'ಖಂಡಿತ .. ಎದುರುಗಡೆ , ಮಗನ ಪಕ್ಕವೇ ಕುಳಿತಿದ್ದೆ . ನನ್ನ ಸೊಸೆ ಮತ್ತು ಮಡದಿ ಹಿಂದೆ ಕುಳಿತಿದ್ದರು ' ಎಂದರು ಓಹ್! ಓ ಕೆ ಹಾಗಿದ್ರೆ ನಿನ್ನ ಸಮಸ್ಯೆ ಸ್ವಲ್ಪ  ಅರ್ಥ  ಆದಂತೆ ಆಗಿದೆ. ಅದಕ್ಕೆ ಪರಿಹಾರ ನಿನ್ನ ಕೈಯಲ್ಲೇ ಇದೆ. ನೀನು ಮನಸ್ಸು ಮಾಡಬೇಕು ಅಷ್ಟೆ'  ಎಂದು ಡಾಕ್ಟರು ನುಡಿದರು.  'ಅಯ್ಯೋ .. ಈ ಕನಸಿನಿಂದ ತಪ್ಪಿಸಿ ಕೊಳ್ಳಲು ಏನು ಮಾಡಕ್ಕೂ ಸಿದ್ದ ಕಣಯ್ಯಾ ನಾನು' ಎಂದು ರಾಯರು ಅವಸರದಲ್ಲೇ ಉತ್ತರಿಸಿದರು. ಆಯ್ತು ಹಾಗಿದ್ರೆ ನಾಳೆ ಬೆಳಗ್ಗೆ  ಬೇಗ ನಮ್ಮ ಮನೆ ಕಡೆ ಬಾ,ಇವತ್ತು ಏನೂ ಆಗಲ್ಲ ನಿಶ್ಚಿಂತೆಯಿಂದ  ಮಲಗು, ನಾನಿದ್ದೀನಿ ಎಂದ ಸ್ನೇಹಿತನ ಭರವಸೆ ರಾಯರ ಮೊಗದಲ್ಲಿ ಕೊಂಚ ನಗು ಮೂಡಿಸಿತು. ಅವರ ಉಳಿದ ಸ್ನೇಹಿತರೂ ನಡುವೆ ಮಾತನಾಡದೆ ಕುತೂಹಲದಿಂದ ಮುಂದಾಗುವುದನ್ನು ಕಾದು ನೋಡೋಣ ಎಂಬಂತೆ ಕುಳಿತಿದ್ದರು.

ಇದಾಗಿ ಒಂದು ತಿಂಗಳಾದರೂ ರಾಯರು ಮತ್ತು ಡಾಕ್ಟರು ಇಬ್ಬರೂ ಪಾರ್ಕಿನಲ್ಲಿ ಕಾಣಿಸಲಿಲ್ಲ. ಕೆಲವು ದಿನ ಅವರ ಬಗ್ಗೆ ಮಾತನಾಡುತ್ತಾ ಅವರ ದಾರಿ ಕಾಯುತ್ತಿದ್ದ ಸ್ನೇಹಿತರು ಈಗೀಗ ಬೇರೇ ವಿಷಯದ ಕಡೆಗೆ ಗಮನ ಹರಿಸಿದ್ದರು. ಅವತ್ತೂ ಎಂದಿನಂತೆ ಗಾಳಿಸೇವನೆಗಾಗಿ ಬಂದವರು ಸುಮ್ಮನೆ ರಸ್ತೆ ಕಡೆಗೆ ನೋಡುತ್ತಿದ್ದಾಗ ಅಲ್ಲೇ ಒಂದು ಕಾರು ಬಂದು  ನಿಂತಿತು . ಅದರ ಒಳಗಿಂದ ರಾಯರು ಮತ್ತು ಡಾಕ್ಟರು ಇಬ್ಬರೂ ಗೆಲುವಿನ ಮೊಗ ಹೊತ್ತು ಇಳಿದದ್ದು ಕಾಣಿಸಿತು.ಸ್ನೇಹಿತರೆಲ್ಲ ಸಂತಸದಿಂದ  ಬರ ಮಾಡಿಕೊಂಡು ಡಾಕ್ಟರ ಕಡೆ ಕುತೂಹಲದ ನೋಟ ಬೀರಿದರು. ಡಾಕ್ಟರು  ರಾಯರ ಕಡೆಗೆ ನಗುತ್ತ ನೋಡಿ ' ಹೇಳ್ತೀಯೇನಪ್ಪ  ನಿನ್ನ ಕನಸಿನ ತೊಂದರೆಯ ಪರಿಹಾರವನ್ನು ' ಎಂದರು. ರಾಯರು ಸ್ನೇಹಿತನ ಹೆಗಲ ಮೇಲೆ ಕೈ ಹಾಕಿ ನೀನೇ ಹೇಳು. ನೀನೇ ವಿವರಿಸಿದರೆ ಚೆಂದ ಅದು ಎಂದರು. ಉಳಿದ ಸ್ನೇಹಿತರೂ ರಾಯರನ್ನೇ ಅನುಮೋದಿಸಿದರು. ಎಲ್ಲರ  ನೋಟ ತನ್ನ ಮೇಲೆ ಕೇಂದ್ರೀಕೃತವಾಗಿರುವುದನ್ನು  ದೃಢ ಪಡಿಸಿಕೊಂಡ ಡಾಕ್ಟರ್ ಚೌಗಳೆ ಒಮ್ಮೆ ಗಂಟಲು ಸರಿ ಪಡಿಸಿಕೊಂಡು ಶುರು ಮಾಡಿದರು. ನೋಡಿ.. ಇವನೇ ಒಪ್ಪಿ ಕೊಂಡಂತೆ ತೊಂದರೆ ಸುರುವಾದದ್ದೇ ಇವನ ಮಗ ಕಾರು ತಂದ ಮೇಲೆ ಎಂಬುದು ನಿಮಗೆ ನೆನಪಿದೆ ತಾನೆ.. ನನಗಾಗಲೇ  ಇವನ ಸಮಸ್ಯೆಯ ಮೂಲದ ಬಗ್ಗೆ ಸುಳಿವು ಸಿಕ್ಕಿತ್ತು . ನಿಮಗೆಲ್ಲ ತಿಳಿದಿರುವಂತೆ ಇವನಿಗೆ   ಡ್ರೈವಿಂಗ್ ಬರೋದಿಲ್ಲ. ಆದರೆ ಮಗ ಕಾರು ತಂದ ನಂತರ ಕಾರು ಕಲಿಯ ಬೇಕೆನ್ನುವ ಆಸೆ ಮೊಳೆಯತೊಡಗಿತು.  ಆದರೆ ಮನೆಯವರಲ್ಲಿ ಹೇಳಿದರೆ ಇಷ್ಟು ವಯಸ್ಸಾದ ಮೇಲೆ ಇದೆಂತಹಾ ಅಸೆಯೆಂದು ತಿರಸ್ಕರಿಸುತ್ತಾರೆಂಬ ಭಯ. ಜೊತೆಗೆ ಒಂದೆರಡು ಬಾರಿ ಇವನಿಗೆ   ಕಾರಿನ ಅಗತ್ಯವಿದ್ದಾಗ  ಮಗ ಜೊತೆಗೆ ಬಾರದಿದ್ದದ್ದು  ಇವನ   ಬಯಕೆ ಇನ್ನಷ್ಟು  ಚಿಗುರಲು ಕಾರಣವಾಯಿತು.  ಕಾರು ಚಲಾಯಿಸಬೇಕೆಂಬ ಹಂಬಲ ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದರಿಂದ , ಇವನ   ಮನಸ್ಸು ಕನಸಿನಲ್ಲಿ  ಅದನ್ನು ನಿಜವಾಗಿಸಲು ತೊಡಗಿತು. ಪೂರ್ಣ ಡ್ರೈವಿಂಗ್ ಜ್ನ್ಯಾನ ಇಲ್ಲದ ಕಾರಣ ,ಇಂಜಿನ್ ಆನ್ ಮಾಡಿ ಏನನ್ನೋ ತುಳಿದರೆ ಕಾರ್ ಚಲಿಸುವುದೆಂದು ಮಾತ್ರ ತಿಳಿದುಕೊಂಡಿದ್ದನು . ಏರು ಹಾದಿ ಬಂದಾಗ ಕುಗ್ಗುವ ವೇಗಕ್ಕೆ ಸರಿಯಾಗಿ ಗೇರ್ ಬದಲಾಯಿಸುವುದು  ಇವನಿಗೆ   ತಿಳಿದಿರಲಿಲ್ಲ.  ತನಗೆ  ಡ್ರೈವಿಂಗ್ ಬರುವುದಿಲ್ಲ ಎಂಬ ಸತ್ಯ ತಿಳಿದಿದ್ದ  ಮನಸ್ಸು  ಅಲ್ಲಿ ಭಯದಿಂದ ಮುಂದೆ ಹೋಗದೆ ನಿಲ್ಲುತ್ತಿತ್ತು. ಜೊತೆಗೆ ಆ ಭಯವೇ ಚಿರತೆಯ ರೂಪ ತಾಳಿ  ಕಣ್ಣೆದುರು ಮೃತ್ಯುವಾಗಿ ಕಾಣಿಸಿ ಕೊಳ್ಳುತಿತ್ತು.. ' ಎಂದು ಒಮ್ಮೆ ಮಾತು ನಿಲ್ಲಿಸಿ, ತದೇಕ ಚಿತ್ತ ದೊಂದಿಗೆ ಕೇಳುತ್ತಿದ್ದ ಸ್ನೇಹಿತರನ್ನು ನೋಡಿದರು .ಆಗ ಸ್ನೇಹಿತರಲ್ಲೊಬ್ಬರು, ಅದು ಸರಿ ಇವರ ಸಮಸ್ಯೆ  ತುಂಬಾ ಕುತೂಹಲಕಾರಿಯಾಗಿದೆ ! ಇದನ್ನು ಹೇಗೆ ಬಗೆಹರಿಸಿದಿರಿ ಡಾಕ್ಟರ್ ? ಎಂದು ಕೌತುಕದಿಂದ ಪ್ರಶ್ನಿಸಿದರು. ಆಗ  ಡಾಕ್ಟರ್  ಮತ್ತೆ ಪ್ರಾರಂಭಿಸಿ, ' ಇವನ ಭಯಕ್ಕೆ ಇದ್ದುದು ಒಂದೇ ಮದ್ದು'.. ಅದೆಂದರೆ ಡ್ರೈವಿಂಗ್ ಕಲಿಯುವುದು !.. ನಿಮ್ಮಿಂದ ಮರೆಯಾಗಿದ್ದ ಈ ಒಂದು ತಿಂಗಳುಗಳ ಕಾಲವನ್ನು   ಡ್ರೈವಿಂಗ್ ಕಲಿಯಲು ವಿನಿಯೋಗಿಸಿದ್ದೆವು ! ಈಗ ನೋಡಿ   ಮಗನ ಕಾರನ್ನು   ಡ್ರೈವ್ ಮಾಡಿಕೊಂಡು ಬಂದಿದ್ದು  ಇವನೇ .... ಎಂದರು.ಈ ವೃತ್ತಾಂತವನ್ನು  ಕೇಳಿ ಸ್ನೇಹಿತರೆಲ್ಲರೂ  ವಿಸ್ಮಿತರಾದರು . ರಾಯರು ಸ್ನೇಹಿತರ  ಕಡೆಗೆ ಹೆಮ್ಮೆಯಿಂದ ನೋಡಿ ' ಈ  ಖುಶಿಗೆ ನನ್ ಕಡೆಯಿಂದ ನೀವು ಹೇಳಿದ ಹೋಟೆಲ್ನಲ್ಲಿ  ಟ್ರೀಟ್ ಎಂದರು. ಆದರೂ ಕುತೂಹಲ ತಣಿಯದ ಒಬ್ಬ ಮಿತ್ರ ಕೇಳಿದ. "ಅದೆಲ್ಲ ಸರಿ ಕಣೋ  .. ಈಗ್ಲೂ ಇನ್ನೊಮ್ಮೆ ಅದೇ ಕನಸು ಬಿತ್ತು ಅಂತಿಟ್ಕೋ , ಆವಾಗೇನು  ಮಾಡ್ತೀಯೋ" ಎಂದರು. ರಾಯರು ಗರ್ವದಿಂದಲೇ .. "ಮಾಡೋದೇನು.?!. ಚಿರತೆ  ನನ್ನ ಕಾರ್ ಹತ್ತಿರ ಬರೋ  ಮುಂಚೆ ನಾನು ಸ್ಪೀಡಾಗಿ ಕಾರು ಮುಂದಕ್ಕೊಡಿಸ್ತೀನಿ " ಎಂದರು . ರಾಯರ ಆತ್ಮ ವಿಶ್ವಾಸಭರಿತ ಮಾತುಗಳನ್ನು  ಕೇಳಿ ಸ್ನೇಹಿತರೆಲ್ಲರೂ ಕುಶಿಯಿಂದ ನಕ್ಕರು. ರಾಯರೂ ಸಹ ಸ್ಮಿತ ವದನರಾಗಿ ,  "ಈಗೇನು ನಗುತ್ತಾ  ಇಲ್ಲೆ ಕೂತಿರ್ತಿರೋ.. ಅಲ್ಲ ಹೋಟೆಲಿಗೆ ನನ್ನ ಜೊತೆ ಕಾರಲ್ಲಿ ಬರ್ತೀರೋ.."  ಎಂದರು. "ಸರಿ ನಡಿಯಪ್ಪಾ ಬೇಗ"  ಎಂದು ಮುಂದಕ್ಕೆ ಸಾಗುತ್ತಿದ್ದ ರಾಯರ ಹಿಂದೆ ಲಘುಬಗೆಯಿಂದ ಹೊರಟ ಮಿತ್ರರು, ಈ ಮನದ ಮಾತೆ ವಿಚಿತ್ರ ಎಂದುಕೊಂಡು ಅವರೊಡನೆ ಹೆಜ್ಜೆ ಜೋಡಿಸಿದರು.  
--