Anitha Naresh Manchi

MyFreeCopyright.com Registered & Protected

Monday, December 13, 2010

ಕನ್ನಡಕ ಪುರಾಣ


 ಚಿಕ್ಕವಳಾಗಿದ್ದಾಗಿನಿಂದ  ನನಗೆ ಅತ್ಯಂತ ಕುತೂಹಲದ ಮತ್ತು ನನ್ನ ಕೈಗೆ ಸದಾ ನಿಲುಕದಷ್ಟು ಎತ್ತರದಲ್ಲಿರುತ್ತಿದ್ದ ವಸ್ತು ಎಂದರೆ ಅಜ್ಜನ ಕನ್ನಡಕ. ಕೇವಲ ಪೇಪರ್ ಓದಲು ಮಾತ್ರ ಬಳಸಲ್ಪಡುತ್ತಿದ್ದ ಅದು  ಕೂಡಲೇ  ಕನ್ನಡಕದ ಗೂಡು ಎಂಬ ಗೂಡಿನ ಬಾಗಿಲೆಳೆದುಕೊಂಡು ನನ್ನ ಕಣ್ಣಿಂದ ಮರೆಯಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಅಜ್ಜ ಮರೆತು ಕೆಳಗಿಟ್ಟ ದಿನ ಅದನ್ನು ಕಣ್ಣಿಗೆ ಏರಿಸಿ ನಡೆಯುವ ಅನುಭವವೇ ಅದ್ಭುತ. ನೆಲ ಇನ್ನಷ್ಟು ತಗ್ಗಿನಲ್ಲಿದ್ದಂತೆ ತೋರಿ ಆ ಅಂದಾಜಿಗೆ ಕಾಲಿಡುವಾಗ ಮೊದಲೇ ನೆಲ ಕಾಲಿಗೆ ತಾಗಿ ಮುಗ್ಗರಿಸುವಂತೆ ಮಾಡುತ್ತಿತ್ತು. ಮತ್ತೊಂದು ರಜೆಗೆ ಅಜ್ಜನ ಮನೆಗೆ ಹೋದಾಗ ಅದು ಕೈ ಜಾರಿ ಬಿದ್ದು ಅದರ ಕನ್ನಡಿ ಹುಡಿಯಾಗಿತ್ತು.ಹೊಸದರ ಅಗತ್ಯವಿಲ್ಲ ಎಂದು ಅಜ್ಜ ಅದರ ಫ್ರೇಮ್ ತೆಗೆದಿರಿಸಿದ್ದರು. ಅದಕ್ಕೆ ಪಾರದರ್ಶಕ ಪ್ಲಾಸ್ಟಿಕ್ ಅಂಟಿಸಿ ಕುಣಿದದ್ದೇ ಕುಣಿದದ್ದು . ಆದರೂ ಅದು ಎತ್ತರ ತಗ್ಗಿನಲ್ಲಿ ನಡೆದಾಡುವ ಅನುಭವ ನೀಡದೆ ಬೇಗನೆ ಬೇಸರ ತರಿಸಿತು. 
 ನಂತರ ಶಾಲೆಗೆ  ಹೋಗುವ ದಿನಗಳಲ್ಲಿ, ಅಂದರೆ ಅದೂ ಹೈಸ್ಕೂಲಿನ ಮೆಟ್ಟಿಲೇರಿದ ಮೇಲೆ ಕೇವಲ ಉಪಾಧ್ಯಾಯರ ಮೂಗಿನ ಮೇಲೆ ರಾರಾಜಿಸುತ್ತಿದ್ದ ಕನ್ನಡಕ, ತಲೆ ನೋವಿನ ಕಾರಣಕ್ಕೆ ಹುಡುಗಿಯೊಬ್ಬಳ ಮೂಗನ್ನು ಅಲಂಕರಿಸಿತು. ಬೇರೆಯ ತರಗತಿಯ ಹುಡುಗಿಯಾಗಿದ್ದರೂ ನಾನಾಗಿ ಮೇಲೆ ಬಿದ್ದು ಅವಳ  ಸ್ನೇಹ ಗಳಿಸಿಕೊಂಡಿದ್ದೆ. ಅವಳು ಕನ್ನಡಕ ಏರಿಸಿದಾಗ ಅದರೊಳಗೆ  ಮಿಣುಗುಟ್ಟುವ ಕಣ್ಣುಗಳ ಸೌಂಧರ್ಯ, ಅದನ್ನು ಹಾಕಿಕೊಂಡಾಗಿನ ಗತ್ತು, ಗೈರತ್ತು ಬೇರೆಲ್ಲಿತ್ತು..?ಆ ಹಾಳು ತಲೆನೋವು ನನಗಾದರೂ ಬರಬಾರದೇ ಎಂದು ಇದ್ದಬದ್ದ ದೇವರನ್ನೆಲ್ಲ ಬೇಡಿಕೊಂಡಿದ್ದೆ. ಆದರೆ ದೇವರಿಗೆ ಕಿವಿ ನೋವಿತ್ತೇನೋ .. ನನ್ನ ಮೊರೆ ಕೇಳಿಸಲೇ ಇಲ್ಲ. 
ಆಗ ನೋಡಿ! ನನ್ನಾಸೆ ಬಳ್ಳಿಗೆ  ನೀರೆರೆಯಲು ಕಾಲಿಟ್ಟಿತ್ತು  ಕೆಂಗಣ್ಣು. ಮದ್ರಾಸ್ ಐ ಎಂಬ ನಾಮದೇಯ ಹೊತ್ತಿದ್ದರೂ, ಕನ್ನಡ ಪ್ರಿಯೆಯಾದ ನಾನು ಅದನ್ನು ಕ್ಷಮಿಸಿ ಸ್ವಾಗತಿಸುವ ತಯಾರಿ  ನಡೆಸಿದ್ದೆ. ಊರಿಗೆ ಬಂದವಳು, ನೀರಿಗೆ ಬಾರದಿದ್ದಾಳೆ ..? ಎಂಬ ನುಡಿಯ ಮೇಲೆ ನಂಬಿಕೆ ಇಟ್ಟು. ಆದರೆ ಇಡೀ ಊರಲ್ಲಿ ಎಲ್ಲರಿಗೂ ಬಂದರೂ, ನನಗೆ ಬಾರದ ಆ ಕಾಯಿಲೆ,  ಅದರ ಸಂಕ್ರಾಮಿಕತೆಯೇ ಬಗ್ಗೆ ನನ್ನಲ್ಲಿ  ಅನುಮಾನ ಹುಟ್ಟಿಸಿತು . ಕಪ್ಪು ಕನ್ನಡಕದಾರಿಗಳಾಗಿ ಸುಂದರಿಯರಾಗಿ ಕಾಣಿಸುತ್ತಿದ್ದ ನನ್ನ ಅನೇಕ ಗೆಳತಿಯರು ನನ್ನಲ್ಲಿ ಅಸೂಯೆ ಹೆಚ್ಚಿಸಿದ್ದು ಸುಳ್ಳಲ್ಲ. ಅಂತೂ ಇಂತೂ ನನ್ನ ಮೇಲೆ ಕರುಣೆ ತೋರದ ಆ ಪಾಪಿ ಕಾಯಿಲೆ ಊರಿಂದ ಕಾಲ್ಕಿತ್ತಿತು.
ಕಾಲೇಜಿನ ದಿನಗಳು  ನಮ್ಮೆಲ್ಲ ಅಲಂಕಾರಕ್ಕೆ ಅಡ್ದಿ ಮಾಡದ ಕಾಲವೆಂದೇ ತಾನೇ ಪ್ರಸಿದ್ಧಿ ..! 'ಸ್ಪೋರ್ಟ್ಸ್ ಡೆ' ಎಂಬ ಒಂದು ದಿನವನ್ನು ನನ್ನ ಆಸೆ ತೀರಿಸುವ ದಿನವಾಗಿ ಆಯ್ಕೆ ಮಾಡಿದೆ. ತಂಪು ಕನ್ನಡಕ ಕಣ್ಣಿಗೇರಿಸಿ ನೂರಾರು ಬಾರಿ ಕನ್ನಡಿಯ ಮುಂದೆ ಸುಳಿದು ನನ್ನ ಅಂದಕ್ಕೆ ನಾನೇ ಬೀಗಿ ಕಾಲೇಜಿನ ದಾರಿ ಹಿಡಿದೆ. ಒಳಗೆ ಕಾಲಿಡುವಾಗಲೇ ಪರಿಚಿತ ಪ್ರಾಧ್ಯಾಪಕರೊಬ್ಬರು ಸಿಕ್ಕಿ " ಅಯ್ಯೋ ..! ಏನಮ್ಮಾ ..! ಕಣ್ಣು ನೋವು ಬಂದಿದೆಯೇ ? ಇವತ್ಯಾಕಮ್ಮಾ ಬಂದೆ? ಹೇಗೂ ಪಾಠ ಇಲ್ಲ,  ಹೋಗು....  ಹಾಸ್ಟೆಲ್ ಗೆ ಹೋಗಿ ರೆಸ್ಟ್ ಮಾಡು...  ಅದು ಗುಣ ಆಗಲಿ, ಜೋರಾದ್ರೆ ಕಷ್ಟ, ಜೊತೆಗೆ ಎಲ್ಲರಿಗೂ ಹರಡಿ ಬಿಡುತ್ತೆ .ಎಂದೆಲ್ಲ ಜೋರಾಗಿ ಹೇಳಿ ಎಲ್ಲರ ಗಮನವನ್ನೂ ನನ್ನಡೆಗೆ ಸೆಳೆದರು. ಇದು ಬಿಸಿಲಿಗೆ  ಅಂತ ತಂಪು ಕನ್ನಡ ಹಾಕಿದ್ದು ಅಂತೆಲ್ಲ ಅವರೆದುರು ಹೇಳಲು ಸಾಧ್ಯವೇ..?ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಮರಳಿ ಹಾಸ್ಟೆಲ್ ಹಾದಿ ಹಿಡಿದೆ. 
ಮದುವೆ ನಿಶ್ಚಯವಾದಾಗ ನನ್ನ ಪತಿಯಲ್ಲಿದ್ದ ಸ್ಕೂಟರ್ ಮೊದಲು ನನ್ನ ಕಣ್ಣಿಗೆ ಬಿತ್ತು. ಅಲ್ಲಿಂದ ಸುರುವಾಯ್ತು ನೋಡಿ ನನ್ನ ಕನಸುಗಳ ಸರಮಾಲೆ. ಎಲ್ಲರೂ ಭಾವಿ ಪತಿಯ ಬಗ್ಗೆ ಕನಸು ಕಾಣುವವರಾದರೆ, ನಾನು  ಸ್ಕೂಟರಿನಲ್ಲಿ   ಕನ್ನಡಕ ಹಾಕಿಕೊಂಡು ಹೋಗುವ ಬಗ್ಗೆ ಕನಸು ಕಾಣುತ್ತಿದ್ದೆ. ಮದುವೆ ಕಳೆದು ನಾನು ಮೊದಲ ಬಾರಿ ಪತಿಯೊಡನೆ ಸ್ಕೂಟರ್ ಏರುವ ಅಮೃತ ಗಳಿಗೆ ಸಮೀಪಿಸಿತು. ಆದರೆ ನನ್ನ  ಖಾಲಿ  ತಲೆಯ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನನ್ನ ಪತಿರಾಯ ದಪ್ಪನೆಯ ಗ್ಲಾಸ್ ಹೊಂದಿದ್ದ ಹೆಲ್ಮೆಟನ್ನು ನನ್ನ ತಲೆಯ ಮೇಲೆರಿಸಬೇಕೆ.. !! ಹ್ಹಾ..!! ವಿಧಿಯಾಟವೇ...!! ಎಂದು ಹೆಲ್ಮೆಟ್ ನ ಮೇಲೆಯೆ ತಲೆ ತಲೆ ಬಡಿದುಕೊಂಡೆ. 
ಈಗಲೂ ನನ್ನಾಸೆ ಕುಂದಿಲ್ಲ. ಇನ್ನೇನು ಕೆಲವೇ ವರ್ಷಗಳು .. ಆಗ ಬರುವ 'ಚಾಲೀಸು'  ನನ್ನ ಕಣ್ಣಿಗೆ  ಕನ್ನಡಕ  ಏರಿಸದೆ ಇರಲಾರದು.ಆದರೆ ಇಲ್ಲೂ ಒಂದು ಭಯದ ನೆರಳಿದೆ. ಚಾಲೀಸು ಗುಣಿಸು ಎರಡರಷ್ಟು ವಯಸ್ಸಾದ ನನ್ನ ಅಜ್ಜಿ  ಕಣ್ಣಿನಿಂದ ಒಂದು ಅಡಿ ದೂರದಲ್ಲಿ ಪುಸ್ತಕ ಹಿಡಿದು ದೊಡ್ಡ ಸ್ವರದಲ್ಲಿ ಒಂದೂ ತಪ್ಪದಂತೆ ಓದುತ್ತಿದ್ದರು, ಯಾವುದೇ ಕನ್ನಡಕದ ನೆರವಿಲ್ಲದೆ. ಸಧ್ಯ ನನಗೆ ಹಾಗಾಗದೆ ಇರಲೆಂದು ಪ್ರಾರ್ಥಿಸುತ್ತಾ,ಸುಂದರ ಕನ್ನಡಕ ನನ್ನ ಮೂಗೇರುವ  ಶುಭ ಗಳಿಗೆಯನ್ನು  ಶಬರಿಯಂತೆ ಕಾಯುತ್ತ ಇದ್ದೇನೆ, ಕನ್ನಡಕ ಒರೆಸುವ ಶುಭ್ರ ಹತ್ತಿ ಬಟ್ಟೆಯನ್ನು ಕೈಯಲ್ಲಿ ಹಿಡಿದು ....

No comments:

Post a Comment