Anitha Naresh Manchi

MyFreeCopyright.com Registered & Protected

Tuesday, December 28, 2010

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ, ಬಂಟ್ವಾಳ ತಾಲೂಕು,ದ.ಕ



ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ, ಬಂಟ್ವಾಳ ತಾಲೂಕು,ದ.ಕ.

ವಿಟ್ಲ ಅರಸರ ಕುಲದೇವರಾಗಿ,ಅರಮನೆಯ ನೇರ ಆಡಳಿತಕ್ಕೆ ಒಳಪಟ್ಟ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು, ಸೀಮೆ ದೇವಸ್ಥಾನ ಎಂದೇ ಪ್ರಸಿದ್ದಿ. ಹತ್ತೊಂಬತ್ತು ಗ್ರಾಮಗಳನ್ನು ಒಳಗೊಂಡ ವಿಟ್ಲ ಸೀಮೆಯ ಮುಖ್ಯ ದೇವಸ್ಥಾನ. ಅತಿ ಅಪೂರ್ವವಾದ ಗಜಪೃಷ್ಠ ಆಕಾರದ ಶೈಲಿ ಮತ್ತು ದ.ಕ. ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡದಾದ ಪಶ್ಚಿಮಾಭಿಮುಖವಾದ ಗರ್ಭಗುಡಿ ಕಾಣಸಿಗುವುದು ಈ ದೇವಾಲಯದ ವೈಶಿಷ್ಟ್ಯ. ಇನ್ನೊಂದು ಅಚ್ಚರಿ ಎಂದರೆ ನಾಲ್ಕು ಸಾವಿರದ ಏಳು ನೂರ ಐವತ್ತು ಚದರ ಅಡಿ ವಿಸ್ತೀರ್ಣ ಹೊಂದಿದ ಈ ದೇವಾಲಯ, ಪಂಚಾಂಗವಿಲ್ಲದೆಯೇ ಗದ್ದೆಯೊಂದರಲ್ಲಿ ನಿರ್ಮಿಸಲ್ಪಟ್ಟಿರುವುದು.
ಪ್ರಧಾನ ಗರ್ಭಗುಡಿಯಲ್ಲಿ ಶಿವನ ಪಂಚರೂಪಗಳಾದ ಸದ್ಯೋಜಾತ , ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಎಂಬ ಹೆಸರುಗಳಿಂದ ಪೂಜಿಸಲ್ಪಡುವ ಐದು ಲಿಂಗಗಳು ಒಂದೇ ಪೀಠದಲ್ಲಿ ರಾರಾಜಿಸುತ್ತಿವೆ. ಇವು ಪ್ರಾಕೃತಿಕ ಶಿಲಾ ಖಂಡಗಳು. ಗಾತ್ರದಲ್ಲಿ ಒಂದಕ್ಕಿಂತ ಒಂದು ಹಿರಿದಾಗಿದೆ.
ಪಾಂಡವರಿಂದ ನಿರ್ಮಿತವಾದ ದೇವಾಲಯವೆಂಬ ಐತಿಹ್ಯವು ಇಲ್ಲಿಗಿದೆ. ಪಾಂಡವರು, ತಮ್ಮ ವನವಾಸ ಕಾಲದಲ್ಲಿ ಇಲ್ಲಿ ವಾಸ ಮಾಡಿದ್ದರು. ಅವರಿಗೆ ಇಲ್ಲೊಂದು ಶಿವ ದೇವಾಲಯವಿರಬೇಕೆಂಬ ಬಯಕೆಯಾಗಿ, ಕಾಶಿಯಿಂದ ಲಿಂಗಗಳನ್ನು ತರಲು ಭೀಮನನ್ನು ಕಳುಹಿಸಿದರು. ಅತ್ಯಂತ ವೇಗವಾಗಿಯೇ ಭೀಮ ಹೋದರೂ, ಪ್ರತಿಷ್ಠ ಸಮಯಕ್ಕೆ ಸರಿಯಾಗಿ ಲಿಂಗಗಳನ್ನು ತರಲು ವಿಫಲನಾದನು. ಆದರೆ ಆ ನಿರ್ದಿಷ್ಟ ಮುಹೂರ್ತದಲ್ಲೇ ಪ್ರತಿಷ್ಠೆ ಆಗಬೇಕಾದುದರಿಂದ ಬೇರೊಂದು ಶಿಲೆಯನ್ನು ಸ್ಥಾಪಿಸಿ ಪೂಜಿಸಿದರು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ಭೀಮನು, ತಾನು ತಂದ ಲಿಂಗಗಳು ವ್ಯರ್ಥವಾಗುವುದೆಂದು, ಮೊದಲು ಪೂಜಿಸಿದ್ದ ಲಿಂಗವನ್ನು ಕಿತ್ತೆಸೆದು, ಕಾಶಿಯಿಂದ ತಾನು ತಂದ ಲಿಂಗಗಳನ್ನು ಆ ಸ್ಥಾನದಲ್ಲಿಟ್ಟನು. ನೈವೇದ್ಯಕ್ಕೆ ಬೇರೇನೂ ಇಲ್ಲದಿದುದರಿಂದ, ಮೊದಲೇ ನೈವೇದ್ಯ ಮಾಡಲಾದ ಅನ್ನಕ್ಕೆ ನೀರು ಚಿಮುಕಿಸಿ, ಅದನ್ನು ಪುನಃ ಬೆಂಕಿಯ ಮೇಲಿರಿಸಿ ಅರ್ಪಿಸಿದನು. ಆದ್ದರಿಂದ ' ವಿಟ್ಲದ ದೇವರಿಗೆ ತಂಗಳು ನೈವೇದ್ಯ' ಎಂಬ ರೂಢಿ ಮಾತು ಇಂದಿಗೂ ಇದೆ.
ಆಕಾರ ಮತ್ತು ಶೈಲಿಯ ಬದಲಾವಣೆಯಿಲ್ಲದೆ, ಈ ದೇವಾಲಯವು ಸುಂದರವಾಗಿ ನವೀಕರಣ ಗೊಳ್ಳುತ್ತಿದೆ. ಇದರ ಕೆಲಸ ಕಾರ್ಯಗಳು ಭವಿಷ್ಯದಲ್ಲಿ ಅದ್ಭುತ ನಿರ್ಮಾಣ, ಮತ್ತು ಗತವೈಭಾವಕ್ಕೆ ಕಿಂಚಿತ್ತೂ ದಕ್ಕೆ ತರದ ನಿಟ್ಟಿನಲ್ಲಿ ಮುಂದುವರಿಯುತ್ತಿದೆ.



1 comment:

  1. ಕಣ್ಮನ ಸೆಳೆಯುವ ಛಾಯಾಚಿತ್ರಗಳೊಂದಿಗೆ, ಪುಣ್ಯ ಭೂಮಿ ವಿಟ್ಟಲದಲ್ಲಿ ನೆಲೆಸಿರುವ ದೇವ ದೇವನಾದ ಶ್ರೀ ಪಂಚಲಿಂಗೇಶ್ವರನ ಬಗ್ಗೆ ಅದ್ಭುತ ಮಹಿತಿಗಳನ್ನಿತ್ತಿದ್ದೀರಿ ! ಹೃತ್ಪೂರ್ವಕ ಧನ್ಯವಾದಗಳು .

    ReplyDelete