Magicbox
Tuesday, September 25, 2012
Friday, August 12, 2011
Sunday, March 20, 2011
ಕಲ್ಲರಳುವ ಕಾಲ
ಸೋಕಿ ಪುಳಕಿತಗೊಂಡು ಪಿಸುಗುಟ್ಟಿದರೂ
ಮಾರ್ನುಡಿಯದ ಒರಟ....
ಹುಚ್ಚೆದ್ದ ಶರಧಿ
ತನ್ನ ತೋಳೊಳಗೆ ಬಂಧಿಸಿ ಆವರಿಸಿದರೂ
ಜಾರಿಸಿ ಸರಿಸಿ ಬೀರುವ ಒಣ ನೋಟ ....
ಅಲೆ ಒಂದಿಷ್ಟು ದೂರ ಸರಿದರೆ ಸಾಕು
ಕಾವೇರಿದ ಬೆಳಕಿಗೆ ಮೈಯೊಡ್ಡಿ
ಹಗುರಾಗುವ ನಿರ್ಧಯ ....
ಎಂದೆಲ್ಲ ಜರಿದರೂ
ಕಲ್ಲು ಹೃದಯ
ಕಾಯುತ್ತಲೇ ಇರುತ್ತದೆ.....
ಹನಿ ಹನಿ ಪ್ರೀತಿಯ ಸಿಂಚನಕ್ಕೆ ಒದ್ದೆಯಾಗಲು
ಕನಸಲ್ಲೂ ಕನವರಿಸಿ
ಮನದಲ್ಲೇ ನುಡಿಯುತ್ತದೆ ಕಡಲಲೆಗೆ
ಬಂದು ಬಿಡು ನನ್ನೊಡನೆ ಎಂದೂ ಮರಳದಂತೆ....
Thursday, March 3, 2011
* * ಯಕ್ಷ ಲೋಕ
ಕಳಚಿಟ್ಟ ನಿತ್ಯದ ವ್ಯಾವಹಾರಿಕ ಉಡುಪು
ಬೇಕಿಲ್ಲ ಇನ್ನು ಕೊಂಚ ಹೊತ್ತದರ ಗೊಡವೆ
ಮುಖದ ವರ್ಣಿಕೆಗೆ ರೂಪುಗಳ ಆವಾಹಿಸಿ
ಕುಣಿಯಬೇಕಿದೆ ಬಗೆ ಬಗೆಯ ಭಂಗಿಯಲಿ
ನಿಮಿಷದಲಿ ರಾಜನೋ ರಾಣಿಯೋ
ರಕ್ಕಸನೋ, ಖಳನೋ ವೇಷದೊಳಗೆ
ಒಮ್ಮೆ ವೀರಾವೇಶ ಮಗದೊಮ್ಮೆ ಶೃಂಗಾರ
ಕರುಣಾ, ರೌದ್ರ ಶಾಂತಗಳ ಪರಿಮಳ
ನಿಂತಲ್ಲೇ ಹೆಜ್ಜೆ ತಪ್ಪದೆ ಸುತ್ತಿದ ರಿಂಗಣ
ನೋಟಕರಿಗೆ ಕುಳಿತಲ್ಲೇ ರೋಮಾಂಚನ
ಪ್ರಕರ ಬೆಳಕಿಗೆ ಹೊಳೆವ ದಿರಿಸ ಹೊತ್ತು
ವ್ಯಕ್ತ ಪಡಿಸಿದ್ದಿಲ್ಲಿ ಬೇರೆಯದೇ ಲೋಕ
ತೆಗೆದೆಸೆವ ಮಾತುಗಳು ಎದೆಯೊಳಗೆ ನಾಟಿ
ಹೌದು ಹೌದೆಂದು ಅರಸಿಕನನೂ ತಲೆದೂಗಿಸಿ
ಕೃತಕ ದೀಪದ ಬದುಕು ಕೊಂಚ ಹೊತ್ತಿನದಾದರು
ಪ್ರತಿ ಕ್ಷಣವೂ ಬೇರೊಂದು ಪಾತ್ರದೊಳ ಹೊಕ್ಕು
ಬಳಲಿ ಬಸವಳಿದ ದೇಹವೂ ಹೊಸ ಜೀವವ ಪಡೆದು
ಆನಂದದ ಅಲೆಗಳಲಿ ಮನ ಮನವ ತೋಯಿಸಿ
ಸಾರ್ಥಕದ ಮಧುರ ಕ್ಷಣಗಳ ತನ್ನೊಳಗೂ ಜೀವಿಸಿ
ಬೆಳಗಾಗುವುದರಲ್ಲಿ ಮತ್ತದೇ ಕಾಲಿ ಬಯಲು
ಕತ್ತಲಲ್ಲಿ ಕಂಡ ಭವ್ಯತೆ ತೋರದಿದ್ದರೂ ಇಲ್ಲಿ
ಎದೆಯೊಳಗೆ ಉಳಿದ ಬಾವದ ಹಕ್ಕಿಯ ನಿರಂತರ ಚಿಲಿಪಿಲಿ
ಬೇಕೆನಿಸುತ್ತದೆ ಇನ್ನೊಮ್ಮೆ ಮತ್ತೊಮ್ಮೆ
ನೆನಪಿನೊಳಗೆ ಪವಡಿಸಿ ಮತ್ತೆ ಮತ್ತೆ ಮಾರ್ಧನಿಸಿ
Friday, February 18, 2011
ಮನದಾಳ
ದಟ್ಟ ಕಾಡಿನ ನಡುವಿನ ಕತ್ತಲ ಹಾದಿ. ಕಾರಿನ ಹೆಡ್ ಲೈಟಿನ ಬೆಳಕಿಗೆ ಬದಿಯ ಮರಗಳೆಲ್ಲ ಚಿತ್ರ ವಿಚಿತ್ರಾಕಾರ ತಾಳಿ ನಿಂತಂತೆ ಅನ್ನಿಸುತಿತ್ತು. ಕಾರು ನಿಧಾನ ಗತಿಯಲ್ಲಿ ಸಾಗುತಿತ್ತು. ಮುಂದುಗಡೆ ಸ್ವಲ್ಪ ಏರು ಹಾದಿಯಂತೆ ಕಂಡಿತು. ಡ್ರೈವರ್ ಸೀಟಿನಲ್ಲಿ ಕುಳಿತಿದ್ದ ರಾಯರು ಯಾಕೋ ಆತಂಕಗೊಂಡಂತೆ ಕಂಡಿತು. ತಟ್ಟನೆ ಬದಿಯಿಂದ ಒಂದು ದೊಡ್ಡ ಚಿರತೆ ಬಂದು ಕಾರಿನ ಕಿಟಕಿಯ ಮೇಲೆ ಎರಡೂ ಕಾಲೂರಿ ಗರ್ಜಿಸಿತು. ರಾಯರ ಇಡೀ ಮೈ ಭಯದಿಂದ ನಡುಗಿ ಜೋರಾಗಿ ಕಿರುಚಲು ಬಾಯಿ ತೆರೆದರು. ಪಕ್ಕನೆ ಎಚ್ಚರವಾಯಿತು. ಹತ್ತಿರದಲ್ಲಿ ಮಲಗಿದ್ದ ಜಾನಕಮ್ಮ ರಾಯರನ್ನು ಅಲುಗಿಸಿ "ಏನಾಯಿತು ರ್ರೀ .. ಯಾಕೋ ನರಳಿದಂತೆ ಕೇಳಿಸಿತು" ಎಂದರು. ರೂಮಿನಲ್ಲಿ ಜೋರಾಗಿ ಫ್ಯಾನ್ ತಿರುಗುತ್ತಿದ್ದರೂ ರಾಯರ ಮೈ ಬೆವೆತು ಒದ್ದೆಯಾಗಿತ್ತು. ಏನೂ ಮಾತನಾಡಲಾರದೆ ರಾಯರು " ಏನೂ ಇಲ್ಲ ಕಣೆ ಯಾಕೋ ಎಚ್ಚರವಾದಂತಾಯಿತಷ್ಟೇ ನೀನು ಮಲಗು" ಎಂದು ಮೆಲ್ಲನೆದ್ದು ಬದಿಯಲ್ಲಿದ್ದ ನೀರ ಹೂಜಿಯಿಂದ ಗಟ ಗಟನೆ ನೀರು ಕುಡಿದರು .ಯಾಕೆ ಈ ಕನಸು ದಿನಾಲೂ ನನ್ನ ಮನಶ್ಯಾಂತಿ ಹಾಳು ಮಾಡುತ್ತದೆ.. ನಿದ್ದೆ ಮಾಡುವುದೆಂದರೆ ಹೆದರಿಕೆ ಆಗುವಂತಾಗಿದೆ. ಯಾಕೋ ಯಾರೊಂದಿಗೂ ಇದನ್ನು ಹೇಳಿ ಕೊಳ್ಳಲು ಮುಜುಗರವೆನಿಸುತಿತ್ತು. ನಾಳೆಯೇ ಇದಕ್ಕೇನಾದರೂ ಪರಿಹಾರ ಹುಡುಕಿಯೇ ತೀರಬೇಕೆಂದು ಕೊಂಡರು. ರಿಟೈರ್ಡ್ ಆಗಿ ಕೆಲ ಕಾಲವಾಗಿತ್ತು. ಸಂಜೆ ವಾಕ್ ಮಾಡುತ್ತಾ ತಮ್ಮ ಮಕ್ಕಳ ಸುದ್ದಿ, ಮನೆ ಸುದ್ದಿ, ಕಾಯಿಲೆ ಕಸಾಲೆಗಳ ಸುದ್ದಿ ಇತ್ಯಾದಿಗಳನ್ನು ರಂಗು ರಂಗಾಗಿ ವರ್ಣನೆ ಮಾಡುತ್ತಾ ಎಲ್ಲಾ ಕಷ್ಟ ಸುಖ ಗಳನ್ನು ಹಂಚಿ ಕೊಳ್ಳುವ ಉತ್ತಮ ಸ್ನೇಹಿತರ ವರ್ಗ ರಾಯರ ಪಾಲಿಗಿತ್ತು.ಅವರ ಬಳಿ ಹೇಳುವುದೇ ಉತ್ತಮ ಎಂದು ಮನ ನುಡಿಯಿತು. ಮತ್ತೆ ಯಾವಾಗ ನಿದ್ದೆ ಸುಳಿಯಿತೋ ತಿಳಿಯಲಿಲ್ಲ.ಪತ್ನಿ ಬಂದು ಇನ್ನೂ " ಮಲ್ಗೆ ಇದ್ದೀರಾ.. ಯಾಕೆ ಏನಾಯ್ತು" ಎಂದಾಗಲೇ ಎಚ್ಚರವಾಗಿದ್ದು. ಏನೊಂದೂ ಮಾತನಾಡದೆ ಮೆಲ್ಲನೆದ್ದು ಹೊರ ನಡೆದ ರಾಯರನ್ನು ಕಂಡು ಅವರ ಪತ್ನಿಗೆ ಯಾಕೋ ಕಸಿವಿಸಿಯಾಯಿತು. ಸದಾ ಬೇಕಿದ್ದರೂ, ಬೇಡದಿದ್ದರೂ ಮಾತನಾಡುತ್ತಿದ್ದ ರಾಯರ ಈ ಹೊಸ ರೂಪ ಮನೆಯ ಸದಸ್ಯರಿಗೆ ಆತಂಕ ತಂದಿತು. ಆದರೆ ತಮ್ಮ ಕನಸಿನ ಚಿಂತೆಯಲ್ಲೇ ಇನ್ನೂ ಮುಳುಗಿದ್ದ ರಾಯರಿಗೆ, ಯಾಕೋ ಇಂದು ಬೇಗನೆ ಸಂಜೆಯೂ ಆಗುವುದಿಲ್ಲವೇನೋ ಎಂಬ ಭಯ ಕಾಡ ತೊಡಗಿತು. ಎಷ್ಟು ಬಾರಿ ಗಂಟೆ ನೋಡಿದರೂ ಸಾಕಾಗಲಿಲ್ಲ. ಮೇಜಿನ ಮೇಲೆ ತಾವು ಓದಿ ಅರ್ಧಕ್ಕೆ ನಿಲ್ಲಿಸಿದ್ದ ಪುಸ್ತಕ ಕಣ್ಣಿಗೆ ಬಿತ್ತು. ಅದನ್ನೆತ್ತಿಕೊಂಡು ಓದ ತೊಡಗಿದರೂ ಒಂದಕ್ಷರವೂ ತಲೆಯೊಳಗಿಳಿಯಲಿಲ್ಲ . ಕನಸಲ್ಲಿ ಮೃತ್ಯುವಾಗಿ ಕಾಡಿದ ಚಿರತೆಯ ಕೆಂಪನೆಯ ಕಣ್ಣುಗಳೇ ಅಕ್ಷರ ರೂಪದಲ್ಲಿ ಬಂದಂತಾಗಿ ಅದನ್ನೆತ್ತಿ ಪಕ್ಕಕ್ಕಿಟ್ಟರು. ಅಂತೂ ಇಂತೂ ಸಂಜೆ ನಾಲ್ಕು ಗಂಟೆ ಹೊಡೆಯುವುದು ಕೇಳಿದ ಕೂಡಲೇ ಕಾಲಿಗೆ ಷೂ ಏರಿಸಿ , "ಇವತ್ತು ಮೈಯಲ್ಲಿ ಆರಾಮಿಲ್ಲದಿದ್ರೆ ಹೊರಗ್ಯಾಕೆ ಹೋಗ್ತೀರಿ" ಎನ್ನುವ ಪತ್ನಿಯ ಮಾತುಗಳು ಕೇಳಿಸಲೇ ಇಲ್ಲವೇನೋ ಎಂಬಂತೆ ನಟಿಸಿ ವೇಗವಾಗಿ ಮನೆಯಿಂದ ಹೊರ ಬಿದ್ದರು.
ಅವರು ಯಾವಾಗಲೂ ಕೂರುತ್ತಿದ್ದ ಪಾರ್ಕಿನ ಬೆಂಚು ಕಾಲಿಯಾಗೆ ಇತ್ತು. ಇನ್ನೂ ಯಾರೂ ಬಂದಿರಲಿಲ್ಲ. ಪಾರ್ಕಿನಲ್ಲಿದ್ದ ಹಚ್ಚ ಹಸುರಿನ ಗಿಡ ಮರ ಬಳ್ಳಿಗಳು, ಕಂಪನ್ನು ಸೂಸುವ ಬಗೆ ಬಗೆಯ ಬಣ್ಣದ ಹೂವುಗಳು, ಸಂಜೆ ಹೊತ್ತಲ್ಲಿ ಎಲ್ಲಿಲ್ಲದ ಲವಲವಿಕೆಯಲ್ಲಿ ಚಿಲಿ ಪಿಲಿ ಗುಟ್ಟುವ ಬಾನಾಡಿಗಳು , ಹರ್ಷದಿಂದ ಕೇಕೆ ಹಾಕಿ ಆಡುವ ಚಿಣ್ಣರು ,ಇವೆಲ್ಲವೂ ಇಂದೇಕೋ ರಾಯರ ಮನಸ್ಸನ್ನು ಮುದಗೊಳಿಸಲಿಲ್ಲ. ಅಲ್ಲೇ ಆಚೆ ಹೊರಗಿನ ರಸ್ತೆಯಲ್ಲಿ ಕೀಲಿ ಕೊಟ್ಟ ಆಟಿಕೆಗಳಂತೆ ಇತ್ತಿಂದತ್ತ ಚಲಿಸುತ್ ತಿದ್ದ ವಾಹನಗಳು ರಾಯರ ಅಶಾಂತಿಯನ್ನು ಹೆಚ್ಚಿಸಿದವು. ಆ ವೇಳೆಯಲ್ಲಿ ಒಬ್ಬೊಬ್ಬರಾಗಿ ಬಂದು ಬೆಂಚು ಆಕ್ರಮಿಸಿದ ಸ್ನೇಹಿತರು ರಾಯರ ಅರಿವಿಗೆ ಬಂದದ್ದು ಅವರಲ್ಲೊಬ್ಬರು ಬೆನ್ನು ತಟ್ಟಿ " ಯಾಕೋ ಸುಮ್ನೆ ಮಂಕು ಬಡಿದಂಗೆ ಕೂತಿದ್ದೀಯ ಏನಾಯ್ತು" ಎಂದಾಗಲೇ. ತಿರುಗಿ ನೋಡಿದಾಗ ಎಲ್ಲರೂ ಸೇರಿ ಆಗಿತ್ತು. ರಾಯರ ದೃಷ್ಟಿ ಆತ್ಮೀಯರಾದ ಡಾಕ್ಟರ್ ಚೌಗಳೆ ಯವರ ಮೇಲಿತ್ತು. ಅವರು ಕಣ್ಣಲ್ಲೇ ಏನಾಯ್ತು ಎಂಬಂತೆ ಮಿತ್ರನ ಕಡೆಗೆ ನೋಡಿದರು.ರಾಯರು ನಿಧಾನಕ್ಕೆ ತಮ್ಮ ಕನಸಿನ ಪ್ರವರ ಶುರು ಮಾಡಿದರು. ಅದರ ವರ್ಣನೆಯನ್ನೆಲ್ಲ ಮುಗಿಸಿ, ಪದೇ ಪದೇ ಬೀಳುತ್ತಿರುವ ಈ ಕನಸು ನನ್ನ ನಿತ್ಯದ ನಿದ್ರೆಯನ್ನೂ ಕಸಿದಿದೆ.ರಾತ್ರಿಯಾದಂತೆ ನಿದ್ರೆ ಬಾರದಂತಿರಲು ಪ್ರಯತ್ನ ಮಾಡುವಂತಾಗುತ್ತದೆ ಎಂದು ತಮ್ಮ ಕಷ್ಟವನ್ನು ತೋಡಿ ಕೊಂಡರು. ಮಿತ್ರರಿಗೂ ವಿಷಯ ಗಂಭೀರವೇ ಎನ್ನಿಸಿತು. ಆದರೆ ಅದರ ಬಗ್ಗೆ ಅಧಿಕಾರಯುತವಾಗಿ ಮಾತನಾಡಲು ಚೌಗಳೆ ಯವರೇ ಸರಿ ಎಂದು ಎಲ್ಲರೂ ಅವರ ಕಡೆಗೆ ನೋಡಿದರು. ಡಾಕ್ಟರ್ ಚೌಗಳೆಯವರು ಕೆಲವು ನಿಮಿಷಗಳ ಮೌನದ ನಂತರ ರಾಯರ ಕಡೆಗೆ ತಿರುಗಿ, ಯಾವತ್ತಿನಿಂದ ಈ ರೀತಿಯ ಕನಸುಗಳು ಬೀಳುತ್ತಿವೆ ಎಂದರು. ರಾಯರೀಗ ನಿಧಾನಕ್ಕೆ ತಮ್ಮ ನೆನಪನ್ನು ಹಿಂದಕ್ಕೊಯ್ದರು. ಆದರೂ ನಿಖರವಾಗಿ ಯಾವತ್ತಿನಿಂದ ಎಂದು ಹೇಳಲು ಸಾಧ್ಯವಾಗಲಿಲ್ಲ. ಆಗ ಚೌಗಳೆಯವರು , 'ಇರಲಿ ಬಿಡು ನೀನು ಕನಸಲ್ಲಿ ಓಡಿಸುತ್ತೇನೆಂದು ಹೇಳಿದೆಯಲ್ಲ ಆ ಕಾರಿನ ಬಣ್ಣ ನೆನಪಿದೆಯೇ' ಎಂದು ಕೇಳಿದರು. ರಾಯರಿಗೀಗ ಅವರ ಎರಡೂ ಪ್ರಶ್ನೆಗೆ ಸಮರ್ಪಕ ಉತ್ತರ ಹೊಳೆಯಿತು.' ಹಾಂ.. ಈಗ ನೆನಪಾಯಿತು ನೋಡು. ಇದೆಲ್ಲ ಪ್ರಾರಂಭವಾಗಿದ್ದು ಮಗ ಸುಮಂತ ಹೊಸ ಕಾರು ತಂದ ಮೇಲೆಯೆ. ಅದೇ ಕಾರನ್ನು ನಾನು ಕನಸಲ್ಲೂ ಬಿಡುತ್ತಿದ್ದುದು ಎಂದರು. ಸರಿ ಸರಿ.... ಮಗನೊಡನೆ ಎಲ್ಲಾದರೂ ದೂರ ಪ್ರಯಾಣ ಮಾಡಿದ್ದಿದೆಯೇ ಎಂದು ಡಾಕ್ಟರು ಕೇಳಿದಾಗ , ರಾಯರು ತಲೆ ಕೆರೆದು ಕೊಳ್ಳುತ್ತಾ.. ದೂರ ಅಂದ್ರೆ .. ಹುಂ .. ನನ್ನ ತಂಗಿ ಜಲಜನ ಮನೆಗೊಮ್ಮೆ ಹೋದದ್ದಿದೆ. ಅದು ಹೆಚ್ಚು ಕಡಿಮೆ 500 ಕಿ ಮೀ ದೂರ ಎಂದರು. ಡಾಕ್ಟರು ತಮ್ಮ ಪ್ರಶ್ನಾವಳಿ ಮುಂದುವರಿಸಿ 'ಆಗ ನೀನು ಎಲ್ಲಿ ಕುಳಿತಿದ್ದೆ ನೆನಪಿದೆಯೇ' ಎಂದರು. ಅದಕ್ಕೆ ರಾಯರು; 'ಖಂಡಿತ .. ಎದುರುಗಡೆ , ಮಗನ ಪಕ್ಕವೇ ಕುಳಿತಿದ್ದೆ . ನನ್ನ ಸೊಸೆ ಮತ್ತು ಮಡದಿ ಹಿಂದೆ ಕುಳಿತಿದ್ದರು ' ಎಂದರು ಓಹ್! ಓ ಕೆ ಹಾಗಿದ್ರೆ ನಿನ್ನ ಸಮಸ್ಯೆ ಸ್ವಲ್ಪ ಅರ್ಥ ಆದಂತೆ ಆಗಿದೆ. ಅದಕ್ಕೆ ಪರಿಹಾರ ನಿನ್ನ ಕೈಯಲ್ಲೇ ಇದೆ. ನೀನು ಮನಸ್ಸು ಮಾಡಬೇಕು ಅಷ್ಟೆ' ಎಂದು ಡಾಕ್ಟರು ನುಡಿದರು. 'ಅಯ್ಯೋ .. ಈ ಕನಸಿನಿಂದ ತಪ್ಪಿಸಿ ಕೊಳ್ಳಲು ಏನು ಮಾಡಕ್ಕೂ ಸಿದ್ದ ಕಣಯ್ಯಾ ನಾನು' ಎಂದು ರಾಯರು ಅವಸರದಲ್ಲೇ ಉತ್ತರಿಸಿದರು. ಆಯ್ತು ಹಾಗಿದ್ರೆ ನಾಳೆ ಬೆಳಗ್ಗೆ ಬೇಗ ನಮ್ಮ ಮನೆ ಕಡೆ ಬಾ,ಇವತ್ತು ಏನೂ ಆಗಲ್ಲ ನಿಶ್ಚಿಂತೆಯಿಂದ ಮಲಗು, ನಾನಿದ್ದೀನಿ ಎಂದ ಸ್ನೇಹಿತನ ಭರವಸೆ ರಾಯರ ಮೊಗದಲ್ಲಿ ಕೊಂಚ ನಗು ಮೂಡಿಸಿತು. ಅವರ ಉಳಿದ ಸ್ನೇಹಿತರೂ ನಡುವೆ ಮಾತನಾಡದೆ ಕುತೂಹಲದಿಂದ ಮುಂದಾಗುವುದನ್ನು ಕಾದು ನೋಡೋಣ ಎಂಬಂತೆ ಕುಳಿತಿದ್ದರು.
ಇದಾಗಿ ಒಂದು ತಿಂಗಳಾದರೂ ರಾಯರು ಮತ್ತು ಡಾಕ್ಟರು ಇಬ್ಬರೂ ಪಾರ್ಕಿನಲ್ಲಿ ಕಾಣಿಸಲಿಲ್ಲ. ಕೆಲವು ದಿನ ಅವರ ಬಗ್ಗೆ ಮಾತನಾಡುತ್ತಾ ಅವರ ದಾರಿ ಕಾಯುತ್ತಿದ್ದ ಸ್ನೇಹಿತರು ಈಗೀಗ ಬೇರೇ ವಿಷಯದ ಕಡೆಗೆ ಗಮನ ಹರಿಸಿದ್ದರು. ಅವತ್ತೂ ಎಂದಿನಂತೆ ಗಾಳಿಸೇವನೆಗಾಗಿ ಬಂದವರು ಸುಮ್ಮನೆ ರಸ್ತೆ ಕಡೆಗೆ ನೋಡುತ್ತಿದ್ದಾಗ ಅಲ್ಲೇ ಒಂದು ಕಾರು ಬಂದು ನಿಂತಿತು . ಅದರ ಒಳಗಿಂದ ರಾಯರು ಮತ್ತು ಡಾಕ್ಟರು ಇಬ್ಬರೂ ಗೆಲುವಿನ ಮೊಗ ಹೊತ್ತು ಇಳಿದದ್ದು ಕಾಣಿಸಿತು.ಸ್ನೇಹಿತರೆಲ್ಲ ಸಂತಸದಿಂದ ಬರ ಮಾಡಿಕೊಂಡು ಡಾಕ್ಟರ ಕಡೆ ಕುತೂಹಲದ ನೋಟ ಬೀರಿದರು. ಡಾಕ್ಟರು ರಾಯರ ಕಡೆಗೆ ನಗುತ್ತ ನೋಡಿ ' ಹೇಳ್ತೀಯೇನಪ್ಪ ನಿನ್ನ ಕನಸಿನ ತೊಂದರೆಯ ಪರಿಹಾರವನ್ನು ' ಎಂದರು. ರಾಯರು ಸ್ನೇಹಿತನ ಹೆಗಲ ಮೇಲೆ ಕೈ ಹಾಕಿ ನೀನೇ ಹೇಳು. ನೀನೇ ವಿವರಿಸಿದರೆ ಚೆಂದ ಅದು ಎಂದರು. ಉಳಿದ ಸ್ನೇಹಿತರೂ ರಾಯರನ್ನೇ ಅನುಮೋದಿಸಿದರು. ಎಲ್ಲರ ನೋಟ ತನ್ನ ಮೇಲೆ ಕೇಂದ್ರೀಕೃತವಾಗಿರುವುದನ್ನು ದೃಢ ಪಡಿಸಿಕೊಂಡ ಡಾಕ್ಟರ್ ಚೌಗಳೆ ಒಮ್ಮೆ ಗಂಟಲು ಸರಿ ಪಡಿಸಿಕೊಂಡು ಶುರು ಮಾಡಿದರು. ನೋಡಿ.. ಇವನೇ ಒಪ್ಪಿ ಕೊಂಡಂತೆ ತೊಂದರೆ ಸುರುವಾದದ್ದೇ ಇವನ ಮಗ ಕಾರು ತಂದ ಮೇಲೆ ಎಂಬುದು ನಿಮಗೆ ನೆನಪಿದೆ ತಾನೆ.. ನನಗಾಗಲೇ ಇವನ ಸಮಸ್ಯೆಯ ಮೂಲದ ಬಗ್ಗೆ ಸುಳಿವು ಸಿಕ್ಕಿತ್ತು . ನಿಮಗೆಲ್ಲ ತಿಳಿದಿರುವಂತೆ ಇವನಿಗೆ ಡ್ರೈವಿಂಗ್ ಬರೋದಿಲ್ಲ. ಆದರೆ ಮಗ ಕಾರು ತಂದ ನಂತರ ಕಾರು ಕಲಿಯ ಬೇಕೆನ್ನುವ ಆಸೆ ಮೊಳೆಯತೊಡಗಿತು. ಆದರೆ ಮನೆಯವರಲ್ಲಿ ಹೇಳಿದರೆ ಇಷ್ಟು ವಯಸ್ಸಾದ ಮೇಲೆ ಇದೆಂತಹಾ ಅಸೆಯೆಂದು ತಿರಸ್ಕರಿಸುತ್ತಾರೆಂಬ ಭಯ. ಜೊತೆಗೆ ಒಂದೆರಡು ಬಾರಿ ಇವನಿಗೆ ಕಾರಿನ ಅಗತ್ಯವಿದ್ದಾಗ ಮಗ ಜೊತೆಗೆ ಬಾರದಿದ್ದದ್ದು ಇವನ ಬಯಕೆ ಇನ್ನಷ್ಟು ಚಿಗುರಲು ಕಾರಣವಾಯಿತು. ಕಾರು ಚಲಾಯಿಸಬೇಕೆಂಬ ಹಂಬಲ ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದರಿಂದ , ಇವನ ಮನಸ್ಸು ಕನಸಿನಲ್ಲಿ ಅದನ್ನು ನಿಜವಾಗಿಸಲು ತೊಡಗಿತು. ಪೂರ್ಣ ಡ್ರೈವಿಂಗ್ ಜ್ನ್ಯಾನ ಇಲ್ಲದ ಕಾರಣ ,ಇಂಜಿನ್ ಆನ್ ಮಾಡಿ ಏನನ್ನೋ ತುಳಿದರೆ ಕಾರ್ ಚಲಿಸು
--
Saturday, January 29, 2011
* * ಮುಗಿಯದ ಪಯಣ
ನಡು ನಡುವೆ ನಿಂತು ಸಾಗಿಸುತ್ತಿತ್ತು, ಎಲ್ಲರ ಅವರವರ ಗುಡಿಯೆಡೆಗೆ
ಏರು ತಗ್ಗುಗಳ ದಾಟಿ ಮುಂದೆ ಮುಂದೆ
ಮರೆಯಾಯಿತೆ ಬಂದ ದಾರಿ ಹಿಂದೆ
ಕಾಲ ಯಾವುದೇ ಇರಲಿ,ಮಿತಿಯಿಲ್ಲದ ಹೊತ್ತು
ಜನರ ಸಂಕಟವು ಅದಕೆ ಗೊತ್ತು
ಯಂತ್ರವಾದರು ಇದೆಯೆ ಹೃದಯವಿದಕೆ
ಈಡೇರಿಸುವುದು ಪ್ರತಿ ಮನದ ಬಯಕೆ
ಜನರಿಗೆನೋ ತಮ್ಮದೇ ಊರು,ನಿಲ್ದಾಣ
ಇದಕಾದರೂ ಒಮ್ಮೆ ನಿಂತರೂ, ಮುಂದುವರಿಯಬೇಕಿದೆ ಯಾನ
ಬೇರಾಗಿಸುವುದೂ, ಒಂದುಗೂಡಿಸುವುದು ತನಗರಿಯದೆ
ಮತ್ತೆ ಸಾಗಿತದು .. ಎಲ್ಲಿಗೀ ಪಯಣ ಬಗೆ ಹರಿವುದೇ
Wednesday, January 26, 2011
* ಸೇರುವ ತವಕ ......
ಸುತ್ತ ಹಸಿರ ಸಿರಿ ಹೊತ್ತು
ಬಳುಕು ನಡೆಯಲಿ
ಕುಲುಕಿ ಸಾಗುವ ಪರಿ ಇದೇನು ..
ಮೈಯೊಳಗೆಲ್ಲಾ ಚಿತ್ತ ಚಿತ್ತಾರದಿ
ಬೆಳಕಿನ ಮಲ್ಲಿಗೆಯ
ಮಾಲೆ ನೇಯ್ದಿರುವರೇನು...
ನೀನೇ ಬರ ನೀಗುವ ಗಂಗೆಯಾದರೂ
ತೀರದ ದಾಹ ಹೊತ್ತಂತೆ ಚಲಿಸುವೆಯೇಕೆ
ಕಂಪಿಸುತಿದೆ ನಿನ್ನ ತನು
ಒಂದೊಂದು ಹನಿ ಯನ್ನೂ ಸಾಗರದೊಳು
ಸಮಾಗಮಿಸುವ ಆಸೆಯಲಿ
ಕುಲುಕುತ್ತಾ ಸಾಗುತಿಹೆಯೇನು ..
ಎಲ್ಲಿಂದ ಬಂತು ಈ ನಾಚಿಕೆ, ವೈಯ್ಯಾರ
ಹರಿವಾಗ ಕೇಳುವ, ಕಾಲ್ಗೆಜ್ಜೆಯ ಮಧುರ ಸ್ವರ
ಹೇಳಿಬಿಡು ನನಗೆ, ಹೆಣ್ಣೇ ನೀನು ....
ಯಾವ ಸ್ಪರ್ಶಕೆ ರೋಮಾಂಚನಗೊಂಡೆ ಹೇಳು
ಒಂದೊಂದು ಕಂಪನಕೂ
ನೂರಾರು ಅರ್ಥವಿಹುದೇನು
ಬಯಲಾದಂತೆ ಕಂಡರೂ
ಹೊತ್ತಿರುವೆ ನೂರಾರು ರಹಸ್ಯಗಳ
ಹುಲು ಮನುಜರು ನಾವು ಬಿಡಿಸಲಾರೆವದನು ..
Subscribe to:
Posts (Atom)